Tuesday, February 3, 2026
Google search engine

Homeರಾಜ್ಯದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆ

ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‍ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಶರತ್ತು ವಿಧಿಸಿ ಮಂಜೂರು ಮಾಡಬೇಕು. ಈ ಬಗ್ಗೆ ಆಗ್ಗಿಂದಾಗೆ ಪರಿಶೀಲನೆ ನಡೆಸಬೇಕು ಎಂದು ಅವರು ಸೂಚಿಸಿದರು.
ರಾಷ್ಟ್ರ್ರೀಯ ಹೆದ್ದಾರಿಗಳಲ್ಲಿ ವಿವಿಧ ಸೂಚನಾ ಫಲಕಗಳಲ್ಲಿ ಕನ್ನಡದಲ್ಲಿ ಮಾಹಿತಿ ನಮೂದಿಸಲು ರಾಷ್ಟ್ರ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗುವುದು. ಬ್ಯಾಂಕುಗಳಲ್ಲಿ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿಯೂ ಒದಗಿಸಲು ಬ್ಯಾಂಕುಗಳ ಸಮಿತಿ ಸಭೆಯಲ್ಲಿ ನಿರ್ದೇಶಿಸಲಾಗುವುದು ಎಂದು ಅವರು ತಿಳಿಸಿದರು.
ಇಂಗ್ಲಿಷ್ ಮೀಡಿಯಂ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದರೂ, ಶಾಲೆಯ ನಾಮ ಫಲಕಗಳಲ್ಲಿ ಕನ್ನಡದಲ್ಲಿಯೂ ಹೆಸರು ಬರೆಯಬೇಕು. ಖಾಸಗಿ ಬಸ್ಸುಗಳ ಬೋರ್ಡುಗಳಲ್ಲಿ ಕನ್ನಡದಲ್ಲಿ ಊರಿನ ಹೆಸರು ಬರೆಯುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಗರದ ಮಾಲ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ನಾಮಫಲಕದಲ್ಲಿ ಹೆಸರನ್ನು ಕನ್ನಡದಲ್ಲಿ ನಮೂದಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಬೇಕು. ಕೆಲ ಉದ್ಯಮಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ನೇಮಿಸಲಾಗುತ್ತಿದ್ದು, ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಠೇವಣಿ ಹಾಗೂ ಹಣ ಹಿಂತೆಗೆಯುವಿಕೆ ಸ್ಲಿಪ್‍ಗಳನ್ನು ಕನ್ನಡದಲ್ಲಿಯೂ ಒದಗಿಸಬೇಕು. ಗ್ರಾಮೀಣ ಪ್ರದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಜ್ಞಾನವಿಲ್ಲದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಅವರ ಮಾತನಾಡಿ, ಮಂಗಳೂರು ನಗರದಲ್ಲಿ ಜಿಲ್ಲಾ ಮಟ್ಟದ ಕನ್ನಡ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಲು ಸಭೆಯಲ್ಲಿ ಆಗ್ರಹಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಸಂತೋಷ್ ಕುಮಾರ್ ಜಿ, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ದೇವಿಪ್ರಸಾದ್, ರಾಜಶೇಖರ್ ಅಜ್ರಿ, ರಾಜೇಶ್ ಡಿಸೋಜಾ, ದಿವಾಕರ್ ದಾಸ್, ಹಸೈನಾರ್ ತಾಳಿತ್ತನೂಜಿ ಮತ್ತಿತರರು ಇದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular