Saturday, February 7, 2026
Google search engine

Homeರಾಜ್ಯದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ರಾಜ್ಯಮಟ್ಟದ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ರಾಜ್ಯಮಟ್ಟದ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಸನ್ಮಾನ

ಅರಮನೆ ಮೈದಾನ ಬೆಂಗಳೂರು ಇಲ್ಲಿ ಕೃಷಿ ಇಲಾಖೆಯಿಂದ ನಡೆದ ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮುಖ್ಯಮಂತ್ರಿಗಳು, ಕೃಷಿ ಸಚಿವರು ಹಾಗೂ ಇತರೆ ಗಣ್ಯರ ಸಮ್ಮುಖದಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯಮಟ್ಟದ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಿಂದ ಆಯ್ಕೆಯಾದ ಒಟ್ಟು 6 ಮಂದಿ ಸಾಧಕ ರೈತರಿಗೆ ಗೌರವ ಪ್ರಧಾನ ಮಾಡಲಾಯಿತು.
       ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಹಾಗೂ ಬೆಳೆ ಸ್ಪರ್ಧೆಯಲ್ಲಿ ಅತ್ಯಧಿಕ ಇಳುವರಿ ಸಾಧಿಸಿದ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವುದು ಕೃಷಿ ಪ್ರಶಸ್ತಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
      ರಾಜ್ಯ ಮಟ್ಟದ ಪ್ರಶಸ್ತಿಗಳಲ್ಲಿ ಪ್ರಥಮ ಬಹುಮಾನಕ್ಕೆ ರೂ.50,000, ದ್ವಿತೀಯ ಬಹುಮಾನಕ್ಕೆ ರೂ.40,000 ಮತ್ತು ತೃತೀಯ ಬಹುಮಾನಕ್ಕೆ ರೂ.35,000 ನಗದು ಬಹುಮಾನ ನೀಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಕ್ರಮವಾಗಿ ರೂ.30,000, ರೂ.25,000 ಮತ್ತು ರೂ.20,000 ಹಾಗೂ ತಾಲೂಕು ಮಟ್ಟದಲ್ಲಿ ರೂ.15,000, ರೂ.10,000 ಮತ್ತು ರೂ.5,000 ಬಹುಮಾನ ನೀಡುವ ವ್ಯವಸ್ಥೆ ಇದೆ.
     2022-23ನೇ ಸಾಲಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೂಡಬಿದ್ರೆ ತಾಲೂಕಿನ ಬೆಳುವಾಯಿ ಗ್ರಾಮದ ಪ್ರೇಮ ಹೆಗಡೆ ಪ್ರಥಮ ಬಹುಮಾನ ಹಾಗೂ ಮುಲ್ಕಿ ತಾಲೂಕಿನ ಎಳತ್ತೂರು ಗ್ರಾಮದ ಸೆಲಿಕ ಅವರು ದ್ವಿತೀಯ ಬಹುಮಾನ ಪಡೆದಿದ್ದರು. ಇವರು ಮುಂಗಾರು ಹಂಗಾಮಿನ ಮಳೆಯಾಶ್ರಿತ ಬತ್ತದ ಬೆಳೆಯಲ್ಲಿ ಅತ್ಯಧಿಕ ಇಳುವರಿ ಸಾಧಿಸಿ ಮಹಿಳಾ ವಿಭಾಗದಲ್ಲಿ ವಿಜೇತರಾಗಿದ್ದಾರೆ.
   2024-25ನೇ ಸಾಲಿನ ಮುಂಗಾರು ಮಳೆಯಾಶ್ರಿತ ಬತ್ತದ ಬೆಳೆ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಾರಾಯಣ ನಾಯಕ್ ಪ್ರಥಮ ಬಹುಮಾನ ಪಡೆದಿದ್ದು, ಮಂಗಳೂರು ತಾಲೂಕಿನ ತಲಪಾಡಿಯ ಕೆ. ಶ್ಯಾಮ ಶೆಟ್ಟಿ ದ್ವಿತೀಯ ಬಹುಮಾನ ಪಡೆದಿದ್ದಾರೆ.  
  ರೈತ ಮಹಿಳೆಯರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಾವಲ್ಪಡೂರು ಗ್ರಾಮದ ಲೀಲಾ ಅವರು ಪ್ರಥಮ ಹಾಗೂ ಕಾವಲ್ ಮೂಡೂರು ಗ್ರಾಮದ ಡಾಲಿ ಜೆ.ಜೆ ಅವರು ದ್ವಿತೀಯ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
   ಕೃಷಿ ಕ್ಷೇತ್ರದಲ್ಲಿ ವಿನೂತನ ಆವಿಷ್ಕಾರಗಳು, ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ಸೃಜನಾತ್ಮಕ ಕಾರ್ಯಗಳ ಮೂಲಕ ರೈತ ಸಮುದಾಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ರೈತರು ಮತ್ತು ರೈತ ಮಹಿಳೆಯರಿಗೆ ಕೃಷಿ ಪಂಡಿತ ಪ್ರಶಸ್ತಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಯಲ್ಲಿ ಪ್ರಥಮ ಬಹುಮಾನ ರೂ.1,25,000, ದ್ವಿತೀಯ ಬಹುಮಾನ ರೂ.1,00,000, ತೃತೀಯ ಬಹುಮಾನ ರೂ.75,000 ಹಾಗೂ ಉದಯೋನ್ಮುಖ ಸಾಧಕರಿಗೆ ರೂ.50,000 ನಗದು ಬಹುಮಾನ ನೀಡಲಾಗುತ್ತದೆ. ಈ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂಟ್ವಾಳ ತಾಲೂಕಿನ ಕಾವಲ್ ಮೂಡೂರು ಗ್ರಾಮದ ಡಾಲಿ ಜಿ.ಜೆ ಅವರು ಕೃಷಿ ಪಂಡಿತ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
    ಈ ರೀತಿಯ ಪ್ರಶಸ್ತಿಗಳು ರೈತ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರದಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular