ಮೈಸೂರು: ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಂಗ್ರೆಸ್ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. “ಅವೈಜ್ಞಾನಿಕ ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗಿದೆ. ಅದನ್ನು ತುಂಬಿಸಲು ಈಗ ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್ಟಿ ನೋಟಿಸ್ ಎಂಬ ಹೆಸರಿನಲ್ಲಿ ಹಗಲು ದರೋಡೆ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಸಂಸದರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದು, “ಜಿಎಸ್ಟಿ ನೋಟಿಸ್ ನೀಡುವುದು ಕೇಂದ್ರ ಸರ್ಕಾರದ ತೀರ್ಮಾನವಲ್ಲ. ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ನಡೆ. ಬೇಕರಿ, ಕಾಂಡಿಮೆಂಟ್ ಮುಂತಾದ ಸಣ್ಣ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ರೂಪಾಯಿಗಳ ತೆರಿಗೆ ಒತ್ತಾಯಿಸಿ ವ್ಯಾಪಾರಿಗಳನ್ನು ಆತಂಕಕ್ಕೆ ದೂಡಲಾಗಿದೆ,” ಎಂದಿದ್ದಾರೆ.
ಯುಪಿಐ ಸೇವೆ ಬಳಕೆಯಂತೂ ಅಂಗಡಿ ಮುಗ್ಗಟ್ಟಿನಲ್ಲಿ ಸ್ಥಗಿತಗೊಳ್ಳುತ್ತಿದೆ. ನಗದು ರಹಿತ ವ್ಯವಹಾರವನ್ನು ರಾಜ್ಯ ಸರ್ಕಾರ ಹಿಂಬಾಲಿಸುತ್ತಿದ್ದು, ಜನರಿಗೂ, ವ್ಯಾಪಾರಿಗಳಿಗೊಗೂ ಸೂಕ್ತ ಮಾಹಿತಿ ನೀಡದೆ ನೋಟಿಸ್ ನೀಡಿರುವುದು ಖಂಡನೀಯ ಎಂದು ಸಂಸದ ಯದುವೀರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಅಂತೆಯೇ, “ಕೇಂದ್ರದ ಮೇಲೆ ಗೂಬೆ ಕೂರಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಸಣ್ಣ ವ್ಯಾಪಾರಿಗಳಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.