ಬೆಂಗಳೂರು : ಮೈಸೂರಿನ ವಿಮಾನ ನಿಲ್ದಾಣದಲ್ಲಿ ನಿನ್ನೆ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ಡಿಕೆಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಿನ್ನೆ ರಾಹುಲ್ ಗಾಂಧಿ, ಮೈಸೂರಿನ ಮೂಲಕ ಕೇರಳಕ್ಕೆ ತೆರಳಿದ್ದರು. ಕೇರಳದಿಂದ ವಾಪಸ್ ಆಗುತ್ತಿದ್ದಾಗ ಮೈಸೂರಿನ ಏರ್ಪೋರ್ಟ್‌ನಲ್ಲಿ ಕೆಲವೇ ನಿಮಿಷಗಳ ಕಾಲ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ನಾಯಕತ್ವ ಪ್ರಶ್ನೆ ಕಿಡಿಗೆದರಿದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.
ಇದುವರೆಗೂ ವಿದೇಶ ಪ್ರವಾಸದಲ್ಲಿದ್ದ ರಾಹುಲ್ ಅವರು, ಇಬ್ಬರಿಗೂ ಭೇಟಿಗೆ ಸಿಕ್ಕಿರಲಿಲ್ಲ. ಇಬ್ಬರೂ ಬಹಳಷ್ಟು ಸಲ ದಿಲ್ಲಿಗೆ ಹೋಗಿ ಬಂದಿದ್ದರೂ ರಾಹುಲ್ ಮಾತ್ರ ಸಿಕ್ಕಿರಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಿಕ್ಕಟ್ಟನ್ನು ರಾಹುಲ್ ಅವರ ಟೇಬಲ್‌ಗೆ ರವಾನಿಸಿ ತಾವು ಪಾರಾಗಿದ್ದಾರೆ. ಮೈಸೂರಿನ ಭೇಟಿಯ ವೇಳೆ ಇಬ್ಬರ ಹತ್ತಿರವೂ ರಾಹುಲ್ ಕೆಲವೇ ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆ ಕುರಿತು ಅವರು ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ.
ಆದರೆ ಡಿಕೆ ಶಿವಕುಮಾರ್ ಅವರಿಗೆ ನಥಿಂಗ್ ಟೂ ವರಿ, ವಿ ವಿಲ್ ಕಾಲ್ ಟು ಡೆಲ್ಲಿ ಸೂನ್ ಎಂದು ಸಂದೇಶ ನೀಡಿದ್ದಾರೆ. ಹೀಗಾಗಿ ಸಿಎಂ, ಡಿಸಿಎಂ ಇಬ್ಬರೂ ಮತ್ತೆ ದಿಲ್ಲಿಗೆ ಹೋಗಬೇಕಾಗಬಹುದು ಎಂಬುದಷ್ಟೇ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಡಿಕೆ ಶಿವಕುಮಾರ್ ಅವರು ಹಾಕಿರುವ ಪೋಸ್ಟ್ ಯಾವ ಅರ್ಥವನ್ನು ಬಿಂಬಿಸುತ್ತಿದೆ ಎಂಬ ಬಗ್ಗೆ ಹಲವರು ಹಲವು ಬಗೆಯ ಅರ್ಥಗಳನ್ನು ಹಚ್ಚುತ್ತಿದ್ದಾರೆ. ಹೈಕಮಾಂಡ್ ತಮ್ಮ ಪರವಾಗಿದೆ ಎಂದು ಬಿಂಬಿಸಲು ಡಿಕೆಶಿ ಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.



