Saturday, January 17, 2026
Google search engine

Homeಸ್ಥಳೀಯಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ

ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ನಡೆದ ಈ ಪ್ರಕರಣದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ವೆ ನಂ. 8ರಲ್ಲಿ 5 ಎಕರೆ 5 ಗುಂಟೆ, ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಭೂಮಿಯನ್ನು ಆಸ್ಪತ್ರೆಗಾಗಿ ಮೀಸಲಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಯಾಗಿರುವ ಆಸ್ಪತ್ರೆಯ ಜಾಗ ಗುರುತಿಸುವ ಮತ್ತು ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸೇರಿ ಜಮೀನು ಪರಿಶೀಲನೆಗೆ ತೆರಳಿದ್ದರು.

ಪರಿಶೀಲನೆ ವೇಳೆ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಯಬೇಕು ಎಂದು ಧಮ್ಕಿ ಹಾಕಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಬಳಿಕ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular