Monday, November 3, 2025
Google search engine

Homeರಾಜ್ಯಕಿತ್ತೂರು ರಾಣಿ ಚೆನ್ನಮ್ಮರ ಐಕ್ಯಸ್ಥಳ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿ- ಬಸವರಾಜ ಹೊರಟ್ಟಿ ಮನವಿ

ಕಿತ್ತೂರು ರಾಣಿ ಚೆನ್ನಮ್ಮರ ಐಕ್ಯಸ್ಥಳ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿ- ಬಸವರಾಜ ಹೊರಟ್ಟಿ ಮನವಿ

ಬೆಂಗಳೂರು: ಬೆಳಗಾವಿಯ ಬೈಲ ಹೊಂಗಲದಲ್ಲಿರುವ ರಾಜಮಾತೆ ಕಿತ್ತೂರು ರಾಣಿ ಚೆನ್ನಮ್ಮರ ಐಕ್ಯಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಬಸವರಾಜ ಹೊರಟ್ಟಿ, ಬೆಳಗಾವಿ ಜಿಲ್ಲೆಯ, ಬೈಲಹೊಂಗಲ ತಾಲೂಕಿನ, ಕಿತ್ತೂರು ಸಂಸ್ಥಾನದ ರಾಜಮಾತೆ ರಾಣಿ ಚೆನ್ನಮ್ಮರವರ ಸಮಾಧಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಕಿತ್ತೂರು ಸಂಸ್ಥಾನದ ಪ್ರಗತಿಯನ್ನು ಸಹಿಸದ ಬ್ರಿಟಿಷರು ಕಿತ್ತೂರನ್ನು ವಶಪಡಿಸಿಕೊಳ್ಳದಿದ್ದರೆ ಭಾರತದಲ್ಲಿನ ಉಳಿದ ಸಂಸ್ಥಾನಗಳಿಗೆ ಇದರಿಂದ ಪ್ರೋತ್ಸಾಹ ದೊರೆತು ಅವರೆಲ್ಲಾ ಒಂದುಗೂಡಿ ದಂಗೆ ಏಳಬಹುದೆಂಬ ಭೀತಿಯಿಂದ ಬ್ರಿಟಿಷರು ಆಕ್ರಮಣಕಾರಿ ಧೋರಣೆ ಹಾಗೂ ಕುಟಿಲೋಪಾಯಗಳಿಂದ ಇಡೀ ಭಾರತವನ್ನು ನಿಧಾನವಾಗಿ ಕಬಳಿಸುತ್ತಾ ಬಂದ ಬ್ರಿಟಿಷರಿಗೆ ದೇಶದಲ್ಲಿ ಅಲ್ಲಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದ್ದರೂ ಕರ್ನಾಟಕದ ಮದ್ಯಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ತೋರಿದ ಸಾಹಸ, ಒಡ್ಡಿದ ಪ್ರತಿರೋಧ ಅನುಪಮವಾದವು. ಅದರಲ್ಲಿ ಆಂಗ್ಲರಿಗೆ ಸೋಲಿನ ರುಚಿ ಉಣಿಸಿದ ಸಣ್ಣ ಸಂಸ್ಥಾನ ಕಿತ್ತೂರಿನದು ವಿಶೇಷ ಹೋರಾಟ, ಆ ಕಾರಣಕ್ಕಾಗಿಯೇ ದೇಶದ ಸ್ವಾತಂತ್ರ ಇತಿಹಾಸದಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರಾದ ಅವರು ನಾಡಿನ ಸ್ವಾತಂತ್ರ್ಯಕ್ಕೆ ಬ್ರಿಟಿಷ್‍ ವಸಹಾತುಶಾಹಿ ವಿರುದ್ಧದ ಹೋರಾಟದಲ್ಲಿ ಅಪ್ರತಿಮಧೈರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ತೋರಿದರು.

1824 ರಲ್ಲಿ ಕಿತ್ತೂರಿನಲ್ಲಿ ನಡೆದ ಹೋರಾಟವು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖವಾಗಿದೆ ಎಂಬುವುದು ಐತಿಹಾಸಿಕ ಪ್ರಸಿದ್ದ ಸಂಗತಿ.ಅವರ ಶೌರ್ಯ, ಸಾಹಸ, ಅದಮ್ಯ ಚೈತನ್ಯ, ನಾಯಕತ್ವಗುಣ ಮತ್ತು ಮಹಿಳಾ ಸಬಲೀಕರಣ ಸಂದೇಶವನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ, ಕಿತ್ತೂರು ಸಂಸ್ಥಾನದ ಐತಿಹಾಸಿಕ ಮಹತ್ವ ಹೆಚ್ಚುವಂತಾಗುವ ಹಾಗೂ ನಮ್ಮರಾಜ್ಯದ ಸಾಂಸ್ಕೃತಿಕ ಹಿರಿಮೆ ಮತ್ತಷ್ಟು ಬಲವಾಗುವ ಸದುದ್ದೇಶದಿಂದ ರಾಜಮಾತೆ ಕಿತ್ತೂರುರಾಣಿ ಚೆನ್ನಮ್ಮ ಅವರ ಐಕ್ಯಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವುದು ಅಗತ್ಯವಾಗಿದೆ. ಆದುದರಿಂದ, ಈ ಅಂಶವನ್ನು ವಿಶೇಷ ಎಂದು ಪರಿಗಣಿಸಿ ಮುಂದಿನ ಯುವ ಪೀಳಿಗೆಗೆ ವಿಶೇಷವಾಗಿ ಮಹಿಳೆಯರಿಗೆ ಪ್ರೇರಣೆ ನೀಡುವಂತಾಗಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಬೈಲಹೊಂಗಲದಲ್ಲಿರುವ ರಾಜಮಾತೆ ಕಿತ್ತೂರುರಾಣಿ ಚೆನ್ನಮ್ಮರ ಐಕ್ಯಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಅಗತ್ಯ ಕ್ರಮಕೈಗೊಳ್ಳಿ ಎಂದು ಹೊರಟ್ಟಿ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular