Friday, December 19, 2025
Google search engine

Homeಸ್ಥಳೀಯಡಿ,20 ಶನಿವಾರ ಸಂಜೆ 4 ಮೈಸೂರು ಅರಮನೆ ಆವರಣದಲ್ಲಿ ಸುವರ್ಣ ಭಾರತಿ ಸ್ತುತಿಶಂಕರ ಪಾರಾಯಣದ ಸಮರ್ಪಣಾ...

ಡಿ,20 ಶನಿವಾರ ಸಂಜೆ 4 ಮೈಸೂರು ಅರಮನೆ ಆವರಣದಲ್ಲಿ ಸುವರ್ಣ ಭಾರತಿ ಸ್ತುತಿಶಂಕರ ಪಾರಾಯಣದ ಸಮರ್ಪಣಾ ಸಮಾರಂಭ,ಸಾವಿರಾರು ಭಕ್ತರಿಂದ ಕಲ್ಯಾಣ ವೃಷ್ಟಿ ಸ್ತವ ಪಾರಾಯಣ

ಭಾರತ ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಶಕ್ತಿಯ ರಾಷ್ಟ್ರ. ಭಾರತದ ರಹಸ್ಯವೇ ಅದರ ಆಧ್ಯಾತ್ಮದ ಮೌಲ್ಯಗಳು. ಆಧ್ಯಾತ್ಮದ ಮೂಲಕ ಜಗತ್ತಿಗೆ ಮಾನವ ಕಲ್ಯಾಣಕ್ಕೆ ,ಪ್ರಕೃತಿ ರಕ್ಷಣೆಗೆ ,ಪ್ರಾಣಿ ಸಂಕುಲಕ್ಕೆ ,ಮಹತ್ತರವಾದ ಜೀವಂತಿಕೆಯ ಶಕ್ತಿಯನ್ನು ನೀಡುತ್ತಿರುವ ಭಾರತದ ಮೂಲ ಆಧಾರವೇ ಈ ದೇಶದ ಋಷಿ ಪರಂಪರೆ . ಮಹರ್ಷಿಗಳು, ಋಷಿ ಗಳು,ಚಿಂತಕರು ,ಆಚಾರ್ಯರು ಗುರುಗಳು ಹಾಗೂ ಸದಾಕಾಲ ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿರುವ ಹಿರಿಯ ಶ್ರೇಷ್ಠ ಜೀವಿಗಳು ಭಾರತದ ಮಹಾನ್ ಶಕ್ತಿ ಯಾಗಿದ್ದಾರೆ.

ಸಂಸ್ಕೃತಿ ಪರಂಪರೆಯನ್ನು ದಿವ್ಯತೆಗೆ ತೆಗೆದುಕೊಂಡು ಹೋಗುತ್ತಿರುವ ಮಹಾ ಗುರುಗಳ ಅನುಷ್ಠಾನ ಹಾಗೂ ಅವರ ಮಾರ್ಗದರ್ಶನವೇ ಕಾರಣವಾಗಿದೆ. ಗುರು ಪರಂಪರೆಗೆ ಭಾರತ ನೀಡಿರುವ ಅಪಾರ ಗೌರವ ,ನಂಬಿಕೆ ವಿಶ್ವಾಸ ,ಭಕ್ತಿ ,ಶ್ರದ್ಧೆ ಎಲ್ಲವೂ ಕೂಡಿ ಗುರು ಪರಂಪರೆ ಸದಾ ಕಾಲ ವಿಶ್ವಕ್ಕೆ ಸನ್ಮಾರ್ಗವನ್ನು ನಡೆಸುವ ಮೂಲಕ ಭಾರತೀಯರಿಗೆ ವಿಶೇಷ ಗೌರವವನ್ನು ,ಮೌಲ್ಯವನ್ನು ಗುರು ಪರಂಪರೆ ತಂದುಕೊಟ್ಟಿದೆ.

ಗುರು ಎಂದಾಕ್ಷಣ ನೆನಪಿಗೆ ಬರುವುದು ಜಗದ್ಗುರು ಶ್ರೀ ಶ್ರೀ ಆದಿ ಶಂಕರಾಚಾರ್ಯರು. ಭಾರತದ ಪ್ರಪ್ರಥಮ ಜಗದ್ಗುರುವಾಗಿ ಭಾರತ ಭೂಮಿಯಲ್ಲಿ ಭಾರತೀಯ ಸಂಸ್ಕೃತಿ ಪರಂಪರೆ, ಮಹಾಕಾವ್ಯಗಳು, ಉಪನಿಷತ್ತುಗಳು, ಸ್ತೋತ್ರಗಳು, ಧಾರ್ಮಿಕ ಪೀಠಗಳನ್ನು ಸ್ಥಾಪಿಸಿ ವಿಶ್ಲೇಷಿಸಿ ,ಸಮಗ್ರ ಅರ್ಥ ರೂಪಿಸಿ ಮಾನವ ಜನಾಂಗಕ್ಕೆ ಶಕ್ತಿಯನ್ನು ನೀಡಿ ಸದಾ ಕಾಲ ಪ್ರೀತಿಯ ಜೀವನವನ್ನು ನಡೆಸಲು ,ಪ್ರಕೃತಿಯ ಆಧ್ಯಾತ್ಮಿಕ ರಹಸ್ಯವನ್ನು ನೀಡಿ ,ಮನಸ್ಸಿಗೆ ಯಾವುದೇ ಕ್ಲೇಶವಿಲ್ಲದೆ ಸುಸೂತ್ರದ ಜೀವನವನ್ನು ಜೀವನ ಮಾರ್ಗವನ್ನು ರೂಪಿಸಿರುವ ಆ ಗುರು ಪರಂಪರೆಗೆ ನಾವು ಸದಾ ಕಾಲ ಗೌರವವನ್ನು ಸಲ್ಲಿಸಲೆಬೇಕು.

ಆದಿ ಜಗದ್ಗುರು ಶಂಕರಾಚಾರ್ಯರು ಭಾರತೀಯ ಸನಾತನ ಹಿಂದೂ ಧರ್ಮದ ಮೂಲ ತತ್ವ ಮತ್ತು ಧರ್ಮಶಾಸ್ತ್ರದ ನಿಯಮಗಳನ್ನು ಜಗತ್ತಿಗೆ ಸ್ಪಷ್ಟಪಡಿಸಿ ಅನೇಕ ಸುಧಾರಣೆಗಳನ್ನು ಮೂಢನಂಬಿಕೆಗಳನ್ನು ತೊಲಗಿಸುವ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸುವ ಉದ್ದೇಶವನ್ನು ಹೊಂದಿ ಧರ್ಮವನ್ನು ಸುಧಾರಿಸಿ ನಿಜವಾದ ಅರ್ಥವನ್ನು ಸರ್ವರಿಗೂ ತಿಳಿಸಿ ಜಗದ್ ವಿಖ್ಯಾತಗೊಳಿಸಿದರು.

ಶ್ರೀ ಶಂಕರಾಚಾರ್ಯರು ಕೇರಳದ ಕಾಲಟಿ ಯಲ್ಲಿ ಸಾಶ 788 ರಲ್ಲಿ ಜನಿಸಿದರು. ತಂದೆ ಶಿವ ಗುರು. ತಾಯಿ ಆರ್ಯಾಂಬೆ.ತಾಯಿಯ ಅನುಮತಿ ಪಡೆದು ಸನ್ಯಾಸಿಯಾಗಿ ನರ್ಮದಾ ನದಿ ತೀರದಲ್ಲಿ ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಭೇಟಿಯಾದರು .ಅಪಾರ ವಿದ್ವತ್ ಹೊಂದಿದ್ದ ಶಂಕರರು ಗುರುವಿನ ಮೂಲಕ ಮಹತ್ತರ ಜ್ಞಾನವನ್ನು ಸ್ವೀಕರಿಸಿದರು . ಶಂಕರಾಚಾರ್ಯರು ದೇಶಾದ್ಯಂತ ಮೂರು ಬಾರಿ ಪ್ರವಾಸ ಮಾಡಿ ಕಾಶ್ಮೀರ, ನೇಪಾಳ, ಬನಾರಸ್, ಬದ್ರಿನಾಥ್ ,ದ್ವಾರಕ, ಪುರಿ, ತಿರುಪತಿ, ಕಾಂಚಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು.
ಇಡೀ ಜಗತ್ತಿಗೆ ಸರ್ವಜ್ಞರಾಗಿ, ಜಗದ್ಗುರುವಾಗಿ ಭಾರತದಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಪುರಿಯ ಗೋವರ್ಧನ ಪೀಠ, ದ್ವಾರಕೆಯ ಕಾಳಿಕಾ ಮಠ, ಬದರಿನಾಥದ ಜ್ಯೋತಿರ್ಮಠ, ಶೃಂಗೇರಿಯ ಶಾರದಾ ಮಠ.

ಭಾರತದ ಅಖಂಡ 4 ದಿಕ್ಕುಗಳಲ್ಲಿ ಪೀಠಗಳು ಹಾಗೂ 4ವೇದಗಳನ್ನು ಸಂರಕ್ಷಣೆ ಮಾಡಿದರು.
ಉಪನಿಷತ್ತು ಮಹಾಕಾವ್ಯಗಳ. ವ್ಯಾಖ್ಯಾನ ಮತ್ತು 150ಕ್ಕೂ ಹೆಚ್ಚು ಸ್ತೋತ್ರಗಳ ರಚನೆಯ ಮೂಲಕ ಮಾನವ ಜನಾಂಗಕ್ಕೆ ಸಾರ್ಥಕವಾದ ಜೀವನದ ಕ್ಷಣಗಳನ್ನು ಸಮರ್ಪಿಸಿಕೊಳ್ಳಲು ಅವಕಾಶವನ್ನು ನೀಡಿದ್ದಾರೆ.

ಅಂದಿನ ಸಮಾಜದ ಎಲ್ಲ ಜನರ ಸಂರಕ್ಷಣೆಗಾಗಿ ಶಿವ, ವಿಷ್ಣು, ಸೂರ್ಯ, ಗಣೇಶ, ಕುಮಾರ ಮತ್ತು ಶಕ್ತಿ ದೇವರುಗಳ ಪೂಜೆಗೆ ಪ್ರಾಮುಖ್ಯತೆಯನ್ನು ನೀಡಿ ಎಲ್ಲಾ ವಿವಿಧ ಪಂಥಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡಿ ಏಕತೆಯ ಜಗದ್ಗುರುವಾದರು. ಷಣ್ಮತ ಸ್ಥಾಪನಾಚಾರ್ಯ ಎಂದೇ ಕರೆಸಿಕೊಳ್ಳುವ ಇವರು ಬ್ರಹ್ಮಸೂತ್ರ, ಉಪನಿಷತ್ತು ,ಭಗವದ್ಗೀತೆಗಳ ಮೇಲೆ ವ್ಯಾಖ್ಯಾನಗಳನ್ನು ಬರೆದರು. ವಿವೇಕ ಚೂಡಾಮಣಿ, ಶಿವಾನಂದ ಲಹರಿ ,ಆನಂದ ಲಹರಿ, ಸೌಂದರ್ಯ ಲಹರಿ, ಭಜಗೋವಿಂದ ಕೃತಿಗಳನ್ನು ರಚಿಸಿ ನೂರಾರು ಸ್ತೋತ್ರಗಳ ರಚನೆಯ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆಯ ಸಾಹಿತ್ಯದ ಮೌಲ್ಯವನ್ನು ನೀಡಿದರು.

ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿಯ ಶಾರದಾ ಪೀಠವು ನಿರಂತರವಾಗಿ ಭಾರತೀಯ ಸನಾತನ ಧಾರ್ಮಿಕ ಮೌಲ್ಯವನ್ನು ಸಂರಕ್ಷಿಸಿ ಜಗತ್ತಿಗೆ ವಿಶ್ವ ಪ್ರಸಿದ್ಧಿಯಾಗಿದೆ .
ಅಧ್ಯಾತ್ಮದ ತಪಸ್ಸಿನ ಕೇಂದ್ರ ಶೃಂಗೇರಿ . ಈ ಪೀಠದ ಎಲ್ಲಾ ಪೀಠಾಧೀಶ್ವರರು ಸಮರ್ಥವಾಗಿ ಆಧ್ಯಾತ್ಮಿಕ ರಹಸ್ಯಗಳನ್ನು ನೀಡಿ ಮಾನವ ಕಲ್ಯಾಣವನ್ನು ಮಾಡುತ್ತಿರುವುದು ನಾವೆಲ್ಲರೂ ಕಾಣಬಹುದು .

ಈ ಪರಂಪರೆಯ 36ನೇ ಪೀಠಾಧೀಶ್ವರರಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂಗಳವರ ಸನ್ಯಾಸ ಸ್ವೀಕಾರದ 50 ವರ್ಷದ ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ ಸುವರ್ಣ ಭಾರತಿ ಎಂಬ ಮಹಾ ಧಾರ್ಮಿಕ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಭಕ್ತ ಸಮೂಹಕ್ಕೆ ಸಮಯೋಚಿತವಾದ ಮಾರ್ಗದರ್ಶನವನ್ನು ಆಶೀರ್ವಾದವನ್ನು ನೀಡುವ ಮೂಲಕ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಸಮರ್ಪಣಾ ಕಾರ್ಯಕ್ರಮವನ್ನು ನಡೆಸುವ ಮೂಲಕ ಅನೇಕ ಸೇವಾ ಕಾರ್ಯಗಳು ,ಧಾರ್ಮಿಕ ಯಾಗಗಳು, ಆರೋಗ್ಯ ಶಿಬಿರಗಳು ಮತ್ತು ವಿದ್ಯಾರ್ಥಿ ವೇತನದ ವಿತರಣೆ ಮತ್ತು ಪುಸ್ತಕಗಳ ಪ್ರಕಟಣೆ ,ನಿತ್ಯ ನಿರಂತರ ಕಾರ್ಯಕ್ರಮಗಳ ಮೂಲಕ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ವರೆಗೆ ಗುರು ಅರ್ಪಣೆಯನ್ನ ಮಾಡುತ್ತಿರುವ ಭಕ್ತ ಗಣ ನಿಜಕ್ಕೂ ಕೂಡ ಅಭಿನಂದನೀಯ ಕಾರ್ಯ ಮಾಡುತ್ತಿದೆ.

ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಸಮರ್ಪಣಾ ಕಾರ್ಯಕ್ರಮ ಈಗಾಗಲೇ ಬೆಂಗಳೂರಿನಲ್ಲಿ ಓಂ ನಮಃ ಶಿವಾಯ ಎಂಬ ವಿಶೇಷ ಕಾರ್ಯಕ್ರಮ ಹಾಗೂ ಶೃಂಗೇರಿಯಲ್ಲಿ ಸ್ತೋತ್ರ ತ್ರಿವೇಣಿ ಮಹಾ ಸಮರ್ಪಣ ಕಾರ್ಯಕ್ರಮ ಹಾಗೂ ಮೈಸೂರಿನ ಅರಮನೆ ಆವರಣದಲ್ಲಿ ಸ್ತುತಿ ಶಂಕರ ಎಂಬ ವಿಶೇಷವಾದ ಮಹಾ ಸಮರ್ಪಣಾ ಕಾರ್ಯಕ್ರಮ 20ನೇ ಶನಿವಾರ ಸಂಜೆ 4 ಗಂಟೆಗೆ ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ಸಾವಿರಾರು ಸಂಖ್ಯೆಯ ಭಕ್ತರಿಂದ ಸಾಮೂಹಿಕ ಪಾರಾಯಣದ ಮೂಲಕ ನಡೆಯಲಿದೆ.

ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಸಮರ್ಪಣಾ ಕಾರ್ಯಕ್ರಮವನ್ನು ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ್ವರರಾದ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು ಹಾಗೂ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳವರ ನೇತೃತ್ವದಲ್ಲಿ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಹಾಗೂ ಶ್ರೀ ಯದುವೀರ ಕೃಷ್ಣದತ್ತ ಒಡೆಯರ್ ಉಪಸ್ಥಿತಿಯಲ್ಲಿ ನಡೆಯುತ್ತಿದೆ.

ಇಡೀ ದೇಶದಲ್ಲಿ ವಿಶೇಷವಾಗಿ ಶಂಕರಾಚಾರ್ಯರ ಅಧ್ಯಯನ ಮತ್ತು ಸಂಶೋಧನೆ ಹಾಗೂ ಸಾಮೂಹಿಕ ಪಾರಾಯಣದ ದಿವ್ಯ ಕಾರ್ಯಕ್ರಮವನ್ನು ರೂಪಿಸುತ್ತಿರುವ ವೇದಾಂತ ಭಾರತಿ ಸಂಸ್ಥೆಯು.ಹಾಗೂ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ವಿಶೇಷವಾಗಿ ಸುವರ್ಣ ಭಾರತಿ ಅಂಗವಾಗಿ ಮೈಸೂರಿನಲ್ಲಿ ಕಲ್ಯಾಣ ವೃಷ್ಟಿಸ್ತವ, ಶ್ರೀ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ, ಶ್ರೀ ಲಕ್ಷ್ಮೀ ನರಸಿಂಹ ಕರುಣರಸ ಸ್ತೋತ್ರ ಪಾರಾಯಣ ಮಹಾ ಅಭಿಯಾನದ ಮೂಲಕ ಸ್ತೋತ್ರ ಪಾರಾಯಣದ ಭಕ್ತಿಯ ಗುರುಅರ್ಪಣ ಪಾರಾಯಣ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದೆ. ಸ್ತುತಿ ಶಂಕರ ಭಕ್ತಿಯ ಧ್ವನಿಯ ಸಾಗರದ ದಿವ್ಯ ಅನುಭವದ ಮಹತ್ತರವಾದ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಧನ್ಯರಾಗಬೇಕು.

ಸುರೇಶ್ ಎನ್ ಋಗ್ವೇದಿ
ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ
ಚಾಮರಾಜನಗರ.
9902317670

RELATED ARTICLES
- Advertisment -
Google search engine

Most Popular