ಗುಂಡ್ಲುಪೇಟೆ: ಅಕ್ರಮವಾಗಿ ಜಿಂಕೆ ಭೇಟೆಯಾಡಿ ಮಾಂಸ ಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಶೇಷ ಹುಲಿ ಸಂರಕ್ಷಣಾ ದಳ (STPF) ಬಂಧಿಸಿರುವ ಘಟನೆ ಕೆಬ್ಬೇಪುರದ ಹುಲಿಯಮ್ಮನ ಗುಡಿ ಸಮೀಪ ಗುರುವಾರ ಮುಂಜಾನೆ ನಡೆದಿದೆ.
ತಾಲೂಕಿನ ಕೋಡಹಳ್ಳಿ ಗ್ರಾಮದ ನಿವಾಸಿ ಮಣಿಕಂಠ (27), ಚೌಡಳ್ಳಿ ಗ್ರಾಮದ ನಿವಾಸಿ ಶಿವಯ್ಯ (45) ಬಂಧಿತ ಆರೋಪಿಗಳು. ಗುರುವಾರ ಮುಂಜಾನೆ ಸುಮಾರು 5:30 ಗಂಟೆಗೆ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಯಾದವ್ ಅವರ ನೇತೃತ್ವದಲ್ಲಿ ಜ್ಞಾನಶೇಖರ್, ರವಿಕುಮಾರ್, ವಿನಯ್ ಹಾಗೂ ವಾಹನ ಚಾಲಕ ಸೋಮು ಅವರನ್ನು ಒಳಗೊಂಡ ಎಸ್.ಟಿ.ಪಿ.ಎಫ್ ಗಸ್ತು ತಂಡವು ಗಸ್ತು ಕರ್ತವ್ಯದಲ್ಲಿದ್ದ ವೇಳೆ ಹೋಂಡಾ ಮೋಟಾರ್ ಸೈಕಲ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಅನುಮಾನಾಸ್ಪದವಾಗಿ ತಡೆದು ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ ಅಕ್ರಮ ಬೇಟೆಗೆ ಬಳಸಲಾಗುತ್ತಿದ್ದ ಆಯುಧಗಳು, ಉಪಕರಣಗಳು ಹಾಗೂ 30 ಕೆಜಿ ಚುಕ್ಕೆ ಜಿಂಕೆಯ ಮಾಂಸ ಪತ್ತೆಯಾಗಿದೆ. ತಕ್ಷಣ ಇಬ್ಬರನ್ನು ಬಂಧಿಸಿ, ಪರವಾನಗಿ ಇಲ್ಲದ ಒಂದು ಮಜಲ್-ಲೋಡಿಂಗ್ ಬಂದೂಕು, ಮದ್ದುಗುಂಡುಗಳು, ಎರಡು ಚಾಕುಗಳು, ಹೆಡ್ ಟಾರ್ಚ್ ಹಾಗೂ ಒಂದು ಹೋಂಡಾ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಎಸ್ಟಿಪಿಎಫ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹಾಗೂ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



