ಬೆಂಗಳೂರು : ಮಾನಹಾನಿ ಆರೋಪ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ಹೊರಡಿಸಿದೆ.
ಸಚಿವ ಶಿವಾನಂದ ಪಾಟೀಲ್ ದಾಖಲು ಮಾಡಿರುವ ಖಾಸಗಿ ದೂರು ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಚಾರಣೆಗೆ ಯತ್ನಾಳ್ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಜ.20ಕ್ಕೆ ಮುಂದೂಡಿದೆ.
ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಯತ್ನಾಳ್ ಅವರು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಈ ಖಾಸಗಿ ದೂರು ದಾಖಲಿಸಿದ್ದರು.



