ಮೈಸೂರು : ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಅನುದಾನ ಬಳಕೆ ಶೇಕಡಾ 100% ಆಗಬೇಕು ಎಂದು ಅಧಿಕಾರಿಗಳಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೈತರಿಂದ ಭೂಮಿ ವಶಪಡಿಸಿಕೊಳ್ಳುವಾಗ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿ ನೀಡಬೇಕು ಇಲ್ಲವೇ ಸೂಕ್ತ ಪರಿಹಾರ ಮೊತ್ತವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾಗಿ ಮಳೆ ಆಗಿದೆ. ರೈತರು ಉತ್ತಮ ಬೆಳೆಗಳನ್ನು ಬೆಳೆದಿದ್ದಾರೆ. ಹೆಚ್ಚು ಮಳೆಯಿಂದ ಹಾನಿ ಆಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಕುಡಿಯುವ ನೀರಿನ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ಮೈಸೂರು ಕೊಡಗು ಲೋಕಸಭಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಅಭಿವೃದ್ಧಿಯ ಜೊತೆಗೆ ಮೈಸೂರಿನ ಪ್ರಾಪಂಪರಿಕತೆಯನ್ನು ಉಳಿಸಿಕೊಳ್ಳಬೇಕು. ಸೂರ್ಯ ಘರ್ ಯೋಜನೆಯಡಿ ಸೋಲಾರ್ ಅಳವಡಿಸಿಕೊಳ್ಳಲು ಸಹಾಯಧನ ಒದಗಿಸುವ ಕುರಿತು ಕಾರ್ಯಾಗಾರ ಮಾಡಿ ಜನರಿಗೆ ಹೆಚ್ಚಿನ ಮಾಹಿತಿ ನೀಡಿ ಯೋಜನೆಯನ್ನು ವಿಸ್ತಾರ ಮಾಡಬೇಕು ಎಂದು ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಡಿ. ಹರೀಶ್ ಗೌಡ ಮಾತನಾಡಿ, ಹುಣಸೂರು ನಗರದಲ್ಲಿ ರಸ್ತೆಗಳ ನಿರ್ಮಾಣ ಮಾಡುವ ಮೊದಲು ಯುಜಿಡಿ ಕನೆಕ್ಷನ್ ಮೊದಲು ಮಾಡಿಕೊಳ್ಳಿ. ರಸ್ತೆ ನಿರ್ಮಾಣ ಆದ ನಂತರ ಮತ್ತೆ ರಸ್ತೆ ಅಗೆಯುವ ಕೆಲಸ ಮಾಡಬಾರದು. ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನು ನ್ಯಾಷನಲ್ ಹೈವೇ ಪಕ್ಕದಲ್ಲಿಯೇ ಅಳವಡಿಸಿದ್ದೀರಿ ಆದರೆ ನ್ಯಾಷನಲ್ ಹೈವೇ ಅಥಾರಿಟಿ ಅವರಿಂದ ಅನುಮತಿಯನ್ನು ಪಡೆದಿಲ್ಲ. ಅವರು ರಸ್ತೆ ಅಗಲೀಕರಣ ಮಾಡಿದಾಗ ಪೈಪ್ ಲೈನ್ ಒಡೆದು ಹುಣಸೂರಿಗೆ ಕುಡಿಯುವ ನೀರಿನ ತೊಂದರೆ ಆಗುತ್ತದೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀವತ್ಸ ಮಾತನಾಡಿ, ಅಮೃತ್ ಯೋಜನೆಯಡಿ ಶ್ರೀರಾಂಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುಡಿಯುವ ನೀರಿನ ಕಾಮಗಾರಿ ಯೋಜನೆ ಪ್ರಗತಿಯನ್ನು ಪೂರ್ಣಗೊಳಿಸಿ ಅದಷ್ಟು ಬೇಗ ಕುಡಿಯುವ ನೀರಿನ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸೂಪರ್ ಸೆಕ್ಕಿಂಗ್ ಮಿಷನ್ ಅನ್ನು ಖರೀದಿಸಿ ಒದಗಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 766 ಮೈಸೂರು ವಿಮಾನ ನಿಲ್ದಾಣದ ಬಳಿ ರಸ್ತೆ ಬೈಪಾಸ್ ನಿರ್ಮಾಣಕ್ಕೆ 9 ಕಿಮೀ ದೂರ ಆಗುತ್ತಿತ್ತು. ಅದರ ಬದಲು ಅಂಡರ್ ಪಾಸ್ ನಿರ್ಮಾಣ ಮಾಡುವುದರಿಂದ ಇದರ ದೂರ 3 ಕಿಮೀ ಗೆ ಇಳಿಯುತ್ತದೆ. ಇದಕ್ಕೆ ಏರ್ ಪೋರ್ಟ್ ಅಥಾರಿಟಿ ಅವರು ಅನುಮತಿ ನೀಡಿದ್ದಾರೆ. ಶ್ರೀರಂಗಪಟ್ಟಣ ಕುಶಾಲನಗರದ ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣಕ್ಕೆ ಭಾಗಶಃ ಭೂಮಿ ಪಡೆಯಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ಇದೆ. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಲು ಹೆಚ್ಚುವರಿಯಾಗಿ 206 ಎಕರೆ ಪ್ರದೇಶ ಅವಶ್ಯಕತೆ ಇದ್ದು ಇದರಲ್ಲಿ 160 ಎಕರೆ ವಶಕ್ಕೆ ಪಡೆಯಲಾಗಿದೆ. ಉಳಿದ 46 ಎಕರೆಯಲ್ಲಿ 36 ಎಕರೆಗೆ ಪರಿಹಾರ ನೀಡುವಿಕೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಮಾತನಾಡಿ ಜಲಜೀವನ್ ಮಿಷನ್ ಶೇಕಡಾ 87 ರಷ್ಟು ಕಾಮಗಾರಿ ಪೂರ್ಣವಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಶೇಕಡಾ 100% ಕಾಮಗಾರಿ ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ. ಈಗ ಲಭ್ಯವಿರುವ ಅನುದಾನದಲ್ಲಿ ಸಾಧ್ಯವಾಗುವ ಪ್ರದೇಶಕ್ಕೆ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಜೀವನ್ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶೇಕಡಾ 55 ರಷ್ಟು ಪ್ರಗತಿ ಆಗಿದೆ. 2025 :26 ನೇ ಸಾಲಿನ ನರೇಗಾ ಯೋಜನೆಯಡಿ ಸೆಪ್ಟೆಂಬರ್ ಅಂತ್ಯದ ವರೆಗೆ 9,80,967 ಮಾನವ ದಿನಗಳ ಗುರಿ ಇತ್ತು ಇದುವರೆಗೂ 9,66,738 ಮಾನವ ದಿನಗಳ ಸೃಜನೆ ಆಗಿದ್ದು ಶೇಕಡಾ 98.55 ರಷ್ಟು ಪ್ರಗತಿ ಆಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಮಾಹಿತಿಯನ್ನು ಸಭೆಗೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ನಗರ ಡಿ ಸಿ ಪಿ ಸುಂದರ್ ರಾಜ್, ದಿಶಾ ಸಮಿತಿಯ ಸದಸ್ಯರಾದ ಅಶ್ವಿನ್ ಕುಮಾರ್ ಎಂ, ಹೆಚ್. ಸಿ. ಕುಮಾರ್, ಡಿ. ಜೆ. ರೇಖಾ ಜಗದೀಶ್, ಲಕ್ಷ್ಮೀ. ಟಿ .ಎಸ್, ಪ್ರೇಮ, ನರಸಿಂಹ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



