ಬೆಂಗಳೂರು : ಅಕ್ಟೋಬರ್ 4 ರಂದು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ವೀರಶೈವ-ಲಿಂಗಾಯತ ಸಮಾಜದವರು, ‘ನಮ್ಮ ಮೆಟ್ರೋಗೆ’ ಬಸವಣ್ಣ ಹೆಸರಿಡಿ ಎಂದು ಒತ್ತಾಯ ಮಾಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ‘ಬಸವ ಮೆಟ್ರೋ’ ಎಂದು ಘೋಷಿಸಿ ಬಿಡುತ್ತಿದ್ದೆ. ಮೆಟ್ರೋ ಕೇಂದ್ರ-ರಾಜ್ಯ ಸರ್ಕಾರದ ಯೋಜನೆ. ಕೇಂದ್ರದ ಅನುಮತಿ ಬೇಕು, ಇಲ್ಲವಾದಲ್ಲಿ ನಾವೇ ಹೆಸರಿಡುತ್ತಿದ್ದೆವು ಎಂದಿದ್ದರು. ನಂತರ ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದರು. ಅದರೆ ಈಗ ಆ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ನಾಯಂಡಹಳ್ಳಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಅಪಾರ ಜನಸ್ತೋಮ ಸಮ್ಮುಖದಲ್ಲಿ ಹಾಲಿ ವಿಜಯನಗರ ಶಾಸಕರು, ಮಾಜಿ ಸಚಿವ ಎಂ. ಕೃಷ್ಣಪ್ಪ ನಮ್ಮ ಮೆಟ್ರೋಗೆ ನಾಡಪ್ರಭು ‘ಕೆಂಪೇಗೌಡ ಮೆಟ್ರೋ’ ಎಂದು ನಾಮಕರಣವಾಗಬೇಕು ಎಂದು ಕೋರಿದ್ದರು.
ಆಗಲೂ ಸಿಎಂ ಸಿದ್ದರಾಮಯ್ಯ ಮುಕ್ತ ಮನಸ್ಸಿನಿಂದ ಪರಿಗಣಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ ಈಗ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ ಎಂದು ವಿಶ್ವ ಒಕ್ಕಲಿಗ ಮಹಾ ವೇದಿಕೆ ನೆನಪಿಸಿದೆ.
ಬೆಂಗಳೂರಿಗೆ ಬಸವಣ್ಣ ಅವರ ಕೊಡುಗೆ ಏನು ಇಲ್ಲ. ಅವರು ಉತ್ತರ ಕರ್ನಾಟಕಕ್ಕೆ ಮಾತ್ರ. ನಮ್ಮ ಮೆಟ್ರೋಗೆ ‘ನಮ್ಮ ಬಸವ ಮೆಟ್ರೋ’ ಎಂದು ಹೆಸರಿಡಲು ಮುಂದಾದರೆ ಕಾನೂನು ಮೂಲಕ ಹೋರಾಟ ಮಾಡಲಾಗುತ್ತದೆ. ಈಗಾಗಲೇ ಈ ವಿಚಾರದಲ್ಲಿ ಆದಿಚುಂಚನಗಿರಿಯ ನಿರ್ಮಲನಂದಶ್ರೀಗಳು ಕೂಡ ‘ಕೆಂಪೇಗೌಡ ಮೆಟ್ರೋ’ ಎಂದು ನಾಮಕರಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಶನಿವಾರ ಸಭೆ ಕರೆದಿದ್ದೇವೆ. ನಗರದ 28 ಶಾಸಕರು ಒಕ್ಕೊರಲಿನಿಂದ ನಮಗೆ ಬೆಂಬಲ ನೀಡಬೇಕು. ಬೆಂಗಳೂರಲ್ಲಿ ಬೆಳೆಯಲು ಬದುಕು ಕಟ್ಟಿಕೊಳ್ಳಲು ಕೆಂಪೇಗೌಡರು ಕಾರಣ ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ರವಿಶಂಕರ್ ಹೇಳಿದ್ದಾರೆ. ಒಟ್ಟಿನಲ್ಲಿ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಸಿಎಂ ಹೇಳಿರುವುದು ಈಗ ವಿರೋಧಕ್ಕೆ ಗುರಿಯಾಗಿದೆ.