ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನೀಡದ ಬಿಜೆಪಿ ನಿರ್ಧಾರವನ್ನು ಟೀಕಿಸಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಇದು ಜೆಡಿಎಸ್ ಹಾಗೂ ಅದರ ನಾಯಕತ್ವಕ್ಕೆ ಆಗಿರುವ ದೊಡ್ಡ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ರಾಜ್ಯಸಭೆಗೆ ದೇವೇಗೌಡರ ಬದಲಿಗೆ ಎಂ. ನಾಗರಾಜ ಅವರನ್ನು ಆಯ್ಕೆ ಮಾಡಿರುವುದನ್ನು ಉಲ್ಲೇಖಿಸಿ, ಜೆಡಿಎಸ್‌ನ್ನು ಬಿಜೆಪಿ ನಿರಂತರವಾಗಿ ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕತ್ವದಿಂದ ಆಗುತ್ತಿರುವ ಅವಮಾನಗಳನ್ನು ಎಚ್.ಡಿ. ಕುಮಾರಸ್ವಾಮಿ ಸಹಿಸಿಕೊಳ್ಳುತ್ತಿರುವುದು ಆಶ್ಚರ್ಯಕರ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ದೇವೇಗೌಡರನ್ನು ಸೋಲಿಸಿದ್ದರು. ಬಳಿಕ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಮಾಜಿ ಪ್ರಧಾನಿ ಎಂಬ ಗೌರವದ ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಅವರು ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಬೆಂಬಲ ನೀಡಿದ್ದರು ಎಂದು ಸುರ್ಜೇವಾಲಾ ನೆನಪಿಸಿದರು.
ದೇವೇಗೌಡರು ಈ ಹಿಂದೆ ಬಿಜೆಪಿ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ‘ಕುಮಾರಸ್ವಾಮಿಯನ್ನೇ ಬಿಟ್ಟುಕೊಡುತ್ತೇನೆ’ ಎಂದು ಹೇಳಿದ್ದರು ಎಂದು ಅವರು ಉಲ್ಲೇಖಿಸಿದರು. ಆದರೆ 2023ರ ಅಕ್ಟೋಬರ್‌ನಲ್ಲಿ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ನಂತರ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದರು ಎಂದರು.
ಈಗ ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ದೇವೇಗೌಡರನ್ನು ಕಡೆಗಣಿಸಿರುವುದು ಅಧಿಕಾರಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳುವ ಜೆಡಿಎಸ್‌ನ ರಾಜಕೀಯ ಧೋರಣೆಯನ್ನು ಬಯಲು ಮಾಡಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.



