ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದ ಹಿರಿಯ ಬಿಜೆಪಿ ನಾಯಕ, ಸಂಸದ ದಿಲೀಪ್ ಘೋಷ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಂಗಾಳದ ದುರ್ಗಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು ಗುರುವಾರ ತಿಳಿಸಿದ್ದಾರೆ.
ಘೋಷ್ ವಿರುದ್ಧ ಐಪಿಸಿ ಸೆಕ್ಷನ್ ೫೦೪ ಮತ್ತು ೫೦೯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದುರ್ಗಾಪುರ ನ್ಯಾಯಾಲಯದಲ್ಲಿ ವಕೀಲರು ಮತ್ತು ಇನ್ನೊಬ್ಬ ವ್ಯಕ್ತಿ ನೀಡಿದ ದೂರುಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅವರ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ಸಲ್ಲಿಸಿದೆ. ಮಾದರಿ ನೀತಿ ಸಂಹಿತೆಯನ್ನು ಬಿಜೆಪಿ ಉಲ್ಲಂಘಿಸಿದೆ ಎಂದೂ ಆರೋಪಿಸಿದೆ. ಘೋಷ್ ಟೀಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಮಾರ್ಚ್ ೨೯ರೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಇದಾದ ಕೆಲವೇ ಗಂಟೆಗಳಲ್ಲಿ, ಮಮತಾ ವಿರುದ್ಧದ ಹೇಳಿಕೆಗಾಗಿ ಘೋಷ್ ಕ್ಷಮೆ ಕೇಳಿದ್ದಾರೆ.