ನವದೆಹಲಿ: ಭಾರತೀಯ ಅಂಚೆ ಇಲಾಖೆಯು ಇತ್ತೀಚೆಗೆ 12,828 ಹುದ್ದೆಗಳ ಭರ್ತಿಗೆ ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಆದರೆ ಆಸಕ್ತರು ಕೊನೆ ದಿನವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಇದೇ ವರ್ಷದ ಆರಂಭದಲ್ಲಿ ಅಂಚೆ ಇಲಾಖೆ ಒಟ್ಟು 40,889 ಹುದ್ದೆಗಳ ನೇಮಕ ಪ್ರಕ್ರಿಯೆ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಈಗಾಗಲೇ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಿತ್ತು.
ಇದಾದ ಬಳಿಕ ಕಳೆದ ತಿಂಗಳ ಮೇ ಮೂರನೇ ವಾರ 12,828 ಗ್ರಾಮೀಣ ಡಾಕ್ ಸೇವಕ (ಜಿಡಿಎಸ್)ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅಂದು ಅರ್ಜಿ ಸಲ್ಲಿಕೆಗೆ ಜೂನ್ 11ರವರೆಗಿನ ಕೊನೆ ದಿನ ಎನ್ನಲಾಗಿತ್ತು. ಇದೀಗ ಕೊನೆ ದಿನವನ್ನು ಜೂನ್ 16ರಿಂದ ಜೂನ್ 23ರವರೆಗೆ ವಿಸ್ತರಣೆ ಮಾಡಲಾಗಿದೆ.
ಅಂಚೆ ಇಲಾಖೆ ಅಧಿಸೂಚನೆ ಪ್ರಕಾರ,ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಮತ್ತು ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ SSLC (10ನೇ ತರಗತಿ) ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಮೇಲೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.