ಮೈಸೂರು: ದೇಶಕ್ಕೆ ಭವಿಷ್ಯದಲ್ಲಿ ಫೈಲಟ್ ರಹಿತ ಏರ್‌ಕ್ರಾಫ್ಟ್‌ಗಳ ಅಗತ್ಯವಿರುವುದರಿಂದ ಎಚ್‌ಎಎಲ್ ಪೈಲಟ್ ಇಲ್ಲದೇ ಚಾಲನೆಗೊಳ್ಳುವ ಏರ್‌ಕ್ರಾಫ್ಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಡಿಆರ್‌ಡಿಒ ಸಂಸ್ಥೆಯ ಏರೋನಾಟಿಕಲ್ ಸಿಸ್ಟಮ್ಸ್‌ನ ವಿಶ್ರಾಂತ ನಿರ್ದೇಶಕ ಹಾಗೂ ಅಗ್ನಿ ಮಿಷನ್‌ಗಳ ಯೋಜನಾ ನಿರ್ದೇಶಕ ಟೆಸ್ಸಿ ಥಾಮಸ್ ತಿಳಿಸಿದರು.
ಪ್ರಾದೇಶಿಕ ಶಿಕ್ಷಣ ಸಂಸ್ಥೆ ೬೧ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸರ್ದಾರ್ ಪಣಿಕ್ಕರ್ ಸ್ಮರಣಾರ್ಥ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುದ್ಧ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಈ ಮಾದರಿಯ ಪೈಲೆಟ್ ಇಲ್ಲದ ಏರ್‌ಕ್ರಾಫ್ಟ್‌ಗಳು ಭವಿಷ್ಯದಲ್ಲಿ ಉಪಯುಕ್ತವಾಗಿವೆ. ಹೀಗಾಗಿ ಈ ರೀತಿಯ ಏರ್‌ಕ್ರಾಟ್ ಸಿದ್ದಪಡಿಸಲು ಸಿದ್ದತೆ ನಡೆಯುತ್ತಿದೆ ಎಂದರು.
ಯುದ್ಧ ವಿಮಾನಗಳ ತಯಾರಿಗೆ ನೀಡಿದಷ್ಟು ಮಹತ್ವವನ್ನು ಸಿವಿಲ್ ಏವಿಯೇಷನ್‌ಗೆ ಏಕೆ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದಿನ ಎರಡು ದಶಕದಲ್ಲಿ ದೊಡ್ಡ ಎಂಜಿನ್‌ಗಳನ್ನು ಒಳಗೊಂಡ ಸಿವಿಲ್ ಏರ್‌ಕ್ರಾಫ್ಟ್‌ಗಳು ಬರುತ್ತವೆ. ಬೆಂಗಳೂರಿನ ಎನ್‌ಎಎಲ್‌ನಲ್ಲಿ ಸದ್ಯ ೯೦ ಸೀಟ್‌ನ ಸಾರಸ್ ಏರ್‌ಕ್ರಾಫ್ಟ್ ತಯಾರಾಗುತ್ತಿದೆ. ನಮ್ಮಲ್ಲಿ ಎಂಜಿನ್ ತಯಾರಿಕೆಗೆ ಪೂರಕ ವಾತಾವರಣವಿದ್ದರೂ ಏರ್‌ಕ್ರಾಫ್ಟ್ ಮೇಲ್ಮೈ ಹಾಗೂ ಇನ್ನಿತರ ಭಾಗಗಳನ್ನು ತಯಾರಿಸುವ ವ್ಯವಸ್ಥೆ ಇಲ್ಲವಾಗಿದೆ. ಅದಕ್ಕೆ ಬೇಕಾಗುವ ಲೋಹವನ್ನು ಪಡೆದುಕೊಂಡಲ್ಲಿ ಈ ಸಮಸ್ಯೆ ದೂರವಾಗಲಿದೆ ಎಂದರು.
ದೊಡ್ಡ ಯೋಜನೆಗಳನ್ನು ಮಾಡಲು ಮುಂದುವರಿದ ದೇಶಗಳಂತೆ ನಮ್ಮಲ್ಲಿ ಆರ್ಥಿಕ ಬಲ ಹಾಗೂ ಮೂಲ ಸೌಕರ್ಯಗಳಿಲ್ಲ. ಕ್ರಮೇಣ ಸಂಶೋಧನೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಕಲಾಂ ಪ್ರೇರಣೆಯಾಗಲಿ: ಕಲಿಕೆ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ. ಆಲೋಚನೆ ಆಸಕ್ತಿಯನ್ನು ಉಂಟುಮಾಡುತ್ತದೆ. ಆಸಕ್ತಿ ಜ್ಞಾನ ತಂದುಕೊಡುತ್ತದೆ. ಜ್ಞಾನ ವ್ಯಕ್ತಿಯನ್ನು ದೊಡ್ಡ ಜ್ಞಾನವಂತನಾಗಿ ಮಾಡುತ್ತದೆ ಎಂಬ ಕಲಾಂ ಅವರ ಮಾತುಗಳು ನಮಗೆ ಸದಾ ಪ್ರೇರಣೆಯಾಗಬೇಕೆಂದರು.
ಡಿಆರ್‌ಡಿಒ ಚಟುವಟಿಕೆಗಳಲ್ಲಿ ಭಾಗವಹಿಸಿ: ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಹೇಗೆ? ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿಆರ್‌ಡಿಒ ಸಂಸ್ಥೆ ಸಂಸ್ಥಾಪನಾ ದಿನಾಚರಣೆಯಂದು ತನ್ನ ಸಂಶೋಧನೆಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುತ್ತದೆ. ಆ ಸಂದರ್ಭದಲ್ಲಿ ಭೇಟಿ ನೀಡಿ ಜ್ಞಾನ ಪಡೆಯಬಹುದು. ಮಾತ್ರವಲ್ಲದೇ ತರಬೇತಿಗಳನ್ನು ಆಯೋಜನೆ ಮಾಡಲಾಗುತ್ತದೆ. ಸಂಸ್ಥೆಯ ಜೊತೆಗೂಡಿ ನಾನಾ ಸಂಶೋಧನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಲಹೆ ನೀಡಿದರು.
ಕಲಾಂ ಸ್ಮರಣೆಯ ಪುಣ್ಯ: ತಾಯಿ ಶಿಕ್ಷಕಿಯಾಗಿ ನಮಗೆ ಉತ್ತಮ ಶಿಕ್ಷಣ ಕೊಡಿಸಿದರು. ಇದಲ್ಲದೇ ಕಲಾಂ ಅವರು ಮೃತಪಟ್ಟ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡುವಾಗ ನಾನು ಹಾಗೂ ಮತ್ತೊಬ್ಬ ವಿಜ್ಞಾನಿಯ ಸಾಧನೆಯನ್ನು ಸ್ಮರಿಸಿದರು. ಅವರು ನಮ್ಮ ಸಾಧನೆಯನ್ನು ಗುರುತಿಸುವಂತಾಗಿದ್ದು ನಮ್ಮ ಪುಣ್ಯ ಎಂದರು.
ಎನ್‌ಇಪಿ ಶಿಕ್ಷಣ ವ್ಯವಸ್ಥೆಯನ್ನೇ ಪುನರ್ ವ್ಯಾಖ್ಯಾನಿಸುತ್ತದೆ. ಈ ಮಾಧ್ಯಮವನ್ನು ಬಳಕೆ ಮಾಡಿಕೊಂಡು ಶ್ರಮವಹಿಸಿ ಅಧ್ಯಯನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲು ಇದರಿಂದ ಯಾವುದೇ ಅಡೆ ತಡೆಗಳಿಲ್ಲ ಎಂದರು.
ಚಿತ್ರನಟಿ ಮಾಳವಿಕ ಅವಿನಾಶ್, ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಹಾಗೂ ಇತರರು ಇದ್ದರು.