ಹುಣಸೂರು: ನಗರ ಮತ್ತು ತಾಲೂಕಿನ ಭಕ್ತಾಧಿಗಳು ನವರಾತ್ರಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿ, ತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ಮುತ್ತು ಮಾರಮ್ಮ ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷ ಹೆಚ್.ವೈ.ಮಹದೇವ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಗುರುವಾರದವರೆಗೆ ಮಾರಿಗುಡಿ ಬೀದಿಯ ಮುತ್ತುಮಾರಮ್ಮ ದೇವಿಗೆ ನವರಾತ್ರಿಯ ಒಂಭತ್ತು ದಿನಗಳು ಕೂಡ ಎಲ್ಲಾ ದೇವಿಯ ರೂಪಗಳನ್ನು ಅಲಂಕರಿಸಲಾಗುವುದು ಎಂದರು.
ಪ್ರತಿದಿನ ದೇವಿಗೆ ಹೂವಿನ ಅಲಂಕಾರದ ಜತೆಗೆ ನೈವೇದ್ಯ, ಪೂಜೆ ಪುರಸ್ಕಾರ ನಡೆಯಲಿದ್ದು, ಒಂಭತ್ತು ನವರಾತ್ರಿಯೂ ಸೇವಾರ್ಥದಾರರಿಂದ ಭಕ್ತಿಗೀತೆ, ಭರತನಾಟ್ಯ, ಸಂಗೀತ, ಆರ್ಕೇಸ್ಟ್ರಾ, ಗೀತಾಗಾಯನ ಮತ್ತು ತಾಯಿಯ ದರ್ಶನಕ್ಕೆ ಬರುವ, ಭಕ್ತಾಧಿಗಳಿಗೆ ಮನರಂಜನೆಯ ಜೊತೆಗೆ ಪ್ರಸಾದ ವಿನಿಯೋಗವಿದ್ದು, ತಾಯಿ ಮುತ್ತು ಮಾರಮ್ಮನ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದ್ದಾರೆ.
ಆಡಳಿತ ಮಂಡಳಿಯ ಉಪಾಧ್ಯಕ್ಷ ಹೆಚ್.ಎಸ್.ಶಿವಯ್ಯ ಮಾತನಾಡಿ, ಆಷಾಡ ಶುಕ್ರವಾರದ ಮಾಸದಲ್ಲೂ ತಾಯಿಯ ಆರಾಧನೆಯ ಬಗ್ಗೆ ವರದಿ ಮಾಡುವ ಮೂಲಕ ಅತೀಹೆಚ್ಚು ಪ್ರಚಾರ ಮಾಡಿ ಭಕ್ತಾಧಿಗಳು ದೇವಸ್ಥಾನಕ್ಕೆ ಬರಲು ಕಾರಣರಾಗಿದ್ದೀರಿ. ಮುಂದೆಯೂ ಪ್ರಚಾರದ ಸಹಕಾರವಿರಲಿ ಎಂದರು.
ಟ್ರಸ್ಟಿನ ಜಂಟಿ ಕಾರ್ಯದರ್ಶಿ ಹೆಚ್.ಆರ್.ಅಶೋಕ್ ರಾಜಲಿಂಗಯ್ಯ ಮಾತನಾಡಿ, ದಿನಾಂಕ 24.09.25 ರ ಬುಧವಾರ ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ವೇಷಭೂಷಣಸ್ವರ್ಧೆ, ಫ್ಯಾನ್ಸಿ ಡ್ರಸ್ ಕಾರ್ಯಕ್ರಮ ಸಂಜೆ 3 ರಿಂದ 5 ರವರೆಗೆ ನಡೆಯಲಿದೆ. ಹಾಗೆ 27.09, ಶನಿವಾರ 30.09 ಮಂಗಳವಾರ ಮಹಿಳೆಯರಿಗಾಗಿ ರಂಗೋಲಿ ಸ್ವರ್ಧೆ, ಲೆಮೆನ್ ಸ್ಪೂನ್ ಹಮ್ಮಿಕೊಂಡಿದ್ದು ಗೆದ್ದವರಿಗೆ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘದಿಂದ ಬಹುಮಾನ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡೈರಿ ಈಶ್ವರ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಭೂತಾನ್ ರಾವ್ ಇದ್ದರು.