ಕಲಬುರಗಿ : ರಾಜ್ಯದ ಕಾರಾಗೃಹಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಾಗೂ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿರುವ ವಿಡಿಯೋಗಳು ವೈರಲ್ ಅದ ಹಿನ್ನಲೆ, ಡಿಜಿಪಿ ಅಲೋಕ್ ಕುಮಾರ್ ಅವರು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶನಿವಾರ(ಜ.೩) ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹ ಜೈಲಿನ ಪ್ರತಿಯೊಂದು ಬ್ಯಾರಕ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದು, ಜೈಲಿನಲ್ಲಿ ಅಕ್ರಮ ವಸ್ತುಗಳ ಸರಬರಾಜು ಹೇಗೆ ನಡೆಯುತ್ತಿದೆ? ಭದ್ರತಾ ಲೋಪಕ್ಕೆ ಕಾರಣ ಯಾರು? ಹಾಗೂ ಕೈದಿಗಳ ಐಷಾರಾಮಿ ಜೀವನ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಇನ್ನೂ ಇತ್ತೀಚೆಗಷ್ಟೇ ಕಲಬುರಗಿ ಜೈಲಿನ ಒಳಗಡೆ ಕೈದಿಗಳು ಇಸ್ಪೀಟ್ ಆಡುವುದು, ಮದ್ಯಪಾನ ಹಾಗೂ ಸಿಗರೇಟ್ ಸೇವಿಸುತ್ತಾ ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆಯು ರಾಜ್ಯ ಕಾರಾಗೃಹ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಲ್ಲದೆ, ಜೈಲಿನ ಭದ್ರತೆಯ ಬಗ್ಗೆ ಸರಕಾರ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲು ಡಿಜಿಪಿ ಅಲೋಕ್ ಕುಮಾರ್ ಅವರು ಇದೀಗ ಅಖಾಡಕ್ಕಿಳಿದಿದ್ದಾರೆ.
ಈ ವೇಳೆ ಜೈಲಿನೊಳಗೆ ಮೊಬೈಲ್, ಅಮಲು ಪದಾರ್ಥ ಹಾಗೂ ಇತರೆ ನಿಷೇಧಿತ ವಸ್ತುಗಳು ಪತ್ತೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಡಿಜಿಪಿ ಅವರ ಈ ದಿಢೀರ್ ಭೇಟಿ ಜೈಲು ಸಿಬ್ಬಂದಿ ಹಾಗೂ ಕೈದಿಗಳಲ್ಲಿ ನಡುಕ ಹುಟ್ಟಿಸಿದೆ.
ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆ ಎಐಜಿ ಆನಂದ ರೆಡ್ಡಿ, ಉತ್ತರ ವಲಯ ಡಿಐಜಿ ಪಿ. ಶೇಷಾ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಜೈಲು ಅಧೀಕ್ಷಕಿ ಡಾ. ಅನಿತಾ ಸೇರಿ ಅನೇಕರು ಇದ್ದರು.



