Thursday, August 7, 2025
Google search engine

Homeಅಪರಾಧಕಾನೂನುಧರ್ಮಸ್ಥಳ ಪ್ರಕರಣ: ಮಾಧ್ಯಮ ಪ್ರಸಾರ ನಿರ್ಬಂಧ ವಿಸ್ತರಣೆ ಅರ್ಜಿ ನ್ಯಾಯಾಲಯದಿಂದ ವಜಾ

ಧರ್ಮಸ್ಥಳ ಪ್ರಕರಣ: ಮಾಧ್ಯಮ ಪ್ರಸಾರ ನಿರ್ಬಂಧ ವಿಸ್ತರಣೆ ಅರ್ಜಿ ನ್ಯಾಯಾಲಯದಿಂದ ವಜಾ

ಬೆಂಗಳೂರು : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದ ಪ್ರಸಾರ/ಪ್ರಕಟಣೆಗೆ ಮಾಧ್ಯಮಗಳನ್ನು ‌ನಿರ್ಬಂಧಿಸಿ ಹೊರಡಿಸಲಾಗಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶ ವಿಸ್ತರಣೆಗೆ ಕೋರಿ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಆಗಸ್ಟ್ 5ರಂದು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತು ಬುಧವಾರ ವಿಚಾರಣೆ ನಡೆಸಿದ 16ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ.ಅನಿತಾ ಅವರಿದ್ದ ಪೀಠ, ಪ್ರತಿಬಂಧಕಾದೇಶ ವಿಸ್ತರಿಸಲು ನಿರಾಕರಿಸಿ, ಅರ್ಜಿ ವಜಾಗೊಳಿಸಿತು. ಇದರಿಂದ, ಮಾಧ್ಯಮಗಳನ್ನು‌ ನಿರ್ಬಂಧಿಸಿ ಈ ಹಿಂದೆ ಹೊರಡಿಸಲಾಗಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶ ತೆರವುಗೊಂಡಂತಾಗಿದೆ. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅತ್ಯಾಚಾರ ಹಾಗೂ ಕೊಲೆಯಾದ ಮೃತದೇಹಗಳನ್ನು ಧರ್ಮಸ್ಥಳದ ವಿವಿಧೆಡೆ ಹೂತಿರುವುದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕ ಹೇಳಿಕೆ ನೀಡಿದ ಬೆನ್ನಿಗೇ ಮಾಧ್ಯಮಗಳು ವ್ಯಾಪಕ ಪ್ರಚಾರ ಆರಂಭಿಸಿದ್ದವು. ಇದರ ಹಿಂದೆಯೇ ಹರ್ಷೇಂದ್ರ ಕುಮಾರ್‌ ಅವರು ತಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ 338 ಮಾಧ್ಯಮ ಸಂಸ್ಥೆಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು.

ಇದನ್ನು ಪ್ರಶ್ನಿಸಿ ದಕ್ಷಿಣ‌ ಕನ್ನಡದ ಕುಡ್ಲ ರ‍್ಯಾಂಪೇಜ್‌ ಡಿಜಿಟಲ್‌ ಮಾಧ್ಯಮ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿತ್ತು. ಈ ಮಧ್ಯೆ, ನ್ಯಾಯಾಲಯ ಜುಲೈ 18 ರಂದು ಹೊರಡಿಸಿದ್ದ ಪ್ರತಿಬಂಧಕಾದೇಶವನ್ನು ಜುಲೈ 24ರಂದು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು.

ನ್ಯಾಯಾಧೀಶರು ಮೊಕದ್ದಮೆ ಸಲ್ಲಿಸಿದ್ದ ಹರ್ಷೇಂದ್ರ ಕುಮಾರ್‌ ಅವರ ಕುಟುಂಬದಿಂದ ನಿರ್ವಹಿಸಲಾಗುತ್ತಿರುವ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಆದ್ದರಿಂದ, ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ತಮ್ಮ ವಕೀಲರಿಗೆ ಮನವಿ ಮಾಡಿದ್ದರು. ವಕೀಲರು ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಮತ್ತು ಪತ್ರ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ನ್ಯಾಯಾಧೀಶರು, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರಿಯುವಂತಾಗಲು ನ್ಯಾಯ ಒದಗಿಸಿದರಷ್ಟೇ ಸಾಲದು, ಅದು ಕಾಣುವಂತಿರಬೇಕು. ನಾನು ಈ ಮೊಕದ್ದಮೆಯಲ್ಲಿ ಪಕ್ಷಗಾರನಲ್ಲದಿದ್ದರೂ ಅಥವಾ ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲದಿದ್ದರೂ ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ ಕಾಯ್ದೆ 1979 ರ ಸೆಕ್ಷನ್ 13(2)(b) ಪ್ರಕಾರ ಅಸಲು ದಾವೆ ಸಂಖ್ಯೆ 5185/2025 ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಪ್ರಧಾನ ನಗರ ಸಿವಿಲ್‌ ಸೆಷನ್ಸ್ ನ್ಯಾಯಾಧೀಶರಿಗೆ ವಿನಂತಿ ಸಲ್ಲಿಸುವುದು ಸೂಕ್ತ ಎಂದು ತಿಳಿಸಿ, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಅನಿತಾ ಅವರು ಪ್ರತಿಬಂಧಕಾದೇಶ ವಿಸ್ತರಣೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿ, ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿದ್ದಾರೆ.

RELATED ARTICLES
- Advertisment -
Google search engine

Most Popular