ಮಂಗಳೂರು (ದಕ್ಷಿಣ ಕನ್ನಡ) : ರಾಜ್ಯಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಧರ್ಮಸ್ಥಳದ ಪ್ರಕರಣದ ಎಸ್ಐಟಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ವಿಧಾನ ಸಭೆಯಲ್ಲಿ ಉತ್ತರ ನೀಡಲಿದ್ದಾರೆ.
‘ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವವರ ಹೆಸರು ಬಹಿರಂಗಪಡಿಸಬೇಕು. ಮುಸುಕುಧಾರಿಯನ್ನು ಬಂಧಿಸಿ ಎಸ್ಐಟಿ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸ ಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪ ತೀವ್ರ ಕುತೂಹಲ ಮೂಡಿಸಿದೆ.
ಅನಾಮಧೇಯ ವ್ಯಕ್ತಿ ನೀಡಿದ ದೂರಿನ ಮೇಲೆ ಎಸ್ಐಟಿ ರಚನೆ ಮಾಡಿರುವುದು, ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟಿರುವ ಶವಗಳಿಗಾಗಿ 15 ದಿನಕ್ಕೂ ಹೆಚ್ಚು ದಿನಗಳಿಂದ ಗುಂಡಿ ತೋಡುತ್ತಿದ್ದರೂ ಏನೂ ದೊರೆಯದ ವಿಚಾರವಾಗಿ ಬಿಜೆಪಿ ನಾಯಕರು ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಸುವ ನಿರೀಕ್ಷೆಯಿದೆ.
ಧರ್ಮಸ್ಥಳ ಕೇಸಿನ ಬಗ್ಗೆ ಇಂದು ಸೋಮವಾರ ವಿಧಾನಸಭೆಯಲ್ಲಿ ಪೂರ್ಣ ಉತ್ತರ ನೀಡುವೆ. ಯಾರೂ ರಾಜಕೀಯ ಮಾಡಬಾರದು. ಇದು ಕಾನೂನಾತ್ಮಕ ಕೇಸಾ ಗಿದ್ದು, ಪೊಲೀಸರು ಎಫ್ ಐಆರ್ ಹಾಕಿ ತನಿಖೆ ಮಾಡ್ತಾರೆ. ತಪ್ಪು ಇದ್ದರೆ ಮಾತ್ರ ಕೇಸ್ ಮುಂದುವರಿಸ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.