ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಧರ್ಮಸ್ಥಳ ಗ್ರಾಮ ನೇತ್ರಾವತಿ ಸ್ನಾನ ಘಟ್ಟಕ್ಕೆ ಕರೆತಂದು ಇಂದು ಮಧ್ಯಾಹ್ನ 1 ಗಂಟೆಗೆ ಸ್ಥಳದ ಮಹಜರು ಆರಂಭಿಸಿದ್ದಾರೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬೀಡು ಬಿಟ್ಟಿದೆ. ನೇತ್ರಾವತಿ ಸ್ನಾನಘಟ್ಟದ ಸಮೀಪವೇ ಸ್ಥಳವನ್ನು ಸಾಕ್ಷಿ ದೂರುದಾರ ಗುರುತಿಸಿದ್ದು, ಈ ಸ್ಥಳದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ಅಧಿಕಾರಿ ಜಿತೇಂದ್ರಕುಮಾರ್ ದಯಾಮ, ಸಿ.ಎ ಸೈಮನ್ ಸೇರಿದಂತೆ ಎಲ್ಲ ಅಧಿಕಾರಿಗಳು ಸ್ಥಳದಲ್ಲಿದ್ದು ಸ್ಥಳಪರಿಶೀಲನೆಯ ನೇತೃತ್ವ ವಹಿಸಿದ್ದಾರೆ.
ಸ್ಥಳ ಪರಿಶೀಲನೆಯನ್ನು ನೋಡಲು ಸ್ಥಳೀಯರು ಸ್ನಾನ ಘಟ್ಟದ ಸಮೀಪ ಸೇರಿದ್ದಾರೆ. ಸ್ಥಳಪರಿಶೀಲನೆಗಾಗಿ ಸಾಕ್ಷಿ ದೂರುದಾರನನ್ನು ಅಧಿಕಾರಿಗಳು ಅರಣ್ಯದ ಒಳಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಇತರ ಮೃತದೇಹಗಳನ್ನು ಹೂತು ಹಾಕಿದ್ದ ಸ್ಥಳಗಳನ್ನು ತೋರಿಸುತ್ತಿರುವುದಾಗಿ ತಿಳಿದು ಬಂದಿದೆ.