ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಮತ್ತು ಉಹಾಪೋಹದ ಸುದ್ದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧವಿಲ್ಲದ, ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಚಿವರ ಖಡಕ್ ಎಚ್ಚರಿಕೆ: ಧರ್ಮಸ್ಥಳ ಪ್ರಕರಣದ ಬಗ್ಗೆ ಡಿಜಿಟಲ್ ಮಾಧ್ಯಮಗಳಲ್ಲಿ ಉಹಾಪೋಹದ ಸುದ್ದಿಗಳು ಹರಿದಾಡುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್, “ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವವರನ್ನು ಬಿಡುವುದಿಲ್ಲ. ಕಾನೂನು ಕ್ರಮ ಖಚಿತವಾಗಿ ಕೈಗೊಳ್ಳುತ್ತೇವೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ದ್ವೇಷ ಭಾಷಣದ ಪ್ರಕರಣಗಳು ಕಾನೂನು ಜಾರಿಯ ನಂತರ ಕಡಿಮೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದ್ವೇಷ ಪೋಸ್ಟ್‌ಗಳು ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ತನಿಖೆಯ ಪ್ರಗತಿ: ಧರ್ಮಸ್ಥಳ ಪ್ರಕರಣದ ತನಿಖೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದು, ತಂಡದ ವರದಿ ಬರುವವರೆಗೆ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಎಸ್‌ಐಟಿಯು ಸಹಾಯವಾಣಿ ತೆರೆದಿದ್ದು, ತನಿಖೆ ತೀವ್ರಗೊಂಡಿದೆ.
ಸರ್ಕಾರದ ಕ್ರಮ: ಸುಳ್ಳು ಸುದ್ದಿಗಳನ್ನು ತಡೆಯಲು ಸರ್ಕಾರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಡಿಜಿಪಿ ಪ್ರಣಬ್ ಮೊಹಂತಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಮುರುಗನ್, ಶರತ್ ಚಂದ್ರ ಮತ್ತಿತರರು ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡುವುದು ಮತ್ತು ಕಾನೂನು ಕ್ರಮಕ್ಕೆ ಸಂಬಂಧಿಸಿದ ಚರ್ಚೆಗಳು ನಡೆದಿವೆ.
ಸಾಮಾಜಿಕ ಪರಿಣಾಮ: ಧರ್ಮಸ್ಥಳದಂತಹ ಧಾರ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಈ ಪ್ರಕರಣ ಸಾಮಾಜಿಕವಾಗಿ ಸೂಕ್ಷ್ಮವಾಗಿದ್ದು, ಸುಳ್ಳು ಸುದ್ದಿಗಳು ಜನರ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆಯಿದೆ. ಸರ್ಕಾರದ ಈ ಕ್ರಮವು ಸಾಮಾಜಿಕ ಶಾಂತಿ ಕಾಪಾಡುವ ಗುರಿಯನ್ನು ಹೊಂದಿದೆ.
ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಇದೆ. ಇದೀಗ ಆರನೇ ಪಾಯಿಂಟ್ ಅಲ್ಲಿ 12ಕ್ಕೂ ಹೆಚ್ಚು ಮೂಳೆಗಳು ಪತ್ತೆಯಾಗಿದ್ದು, ಉಳಿದ ಪಾಯಿಂಟ್ ಗಳಲ್ಲಿ ಇಂದು ಉತ್ಪನನ ಆರಂಭಿಸಲಿದ್ದಾರೆ. ಗುರುವಾರ ನಡೆಸಿದ ಕಾರ್ಯಾಚರಣೆಯ ವೇಳೆ ಆರನೇ ಪಾಯಿಂಟ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದೀಗ ಅದೇ -ಪಾಯಿಂಟ್ ನಲ್ಲಿ ಮನುಷ್ಯನ 12 ಮೂಳೆಗಳು ಪತ್ತೆಯಾಗಿದೆ. ಅದರಂತೆ ಇಂದು ಉಳಿದ ಪಾಯಿಂಟ್ಸ್ ಗಳಲ್ಲಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಸದ್ಯ ಏಳನೇ ಜಾಗವನ್ನು ದೂರುದಾರನ ಸಮ್ಮುಖದಲ್ಲಿಯೇ ಎಸ್‌ಐಟಿ ಅಧಿಕಾರಿಗಳು ಅಗೆಸಿದ್ದಾರೆ. ಆದರೆ ಈ ಜಾಗದಲ್ಲಿ ಇದುವರೆಗೆ ಮೃತದೇಹದ ಯಾವುದೇ ಕುರುಹು ಕಂಡುಬಂದಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.