ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಸುತ್ತಮುತ್ತ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಗುರುತಿಸಿರುವ 13ನೇ ಜಾಗದಲ್ಲಿಂದು ಜಿಪಿಆರ್ ಕಾರ್ಯಾಚರಣೆ ನಡೆಸಲಾಯ್ತು. ಒಂದು ಹಂತದ ಕಾರ್ಯಾಚರಣೆ ಮಧ್ಯಾಹ್ನ ವೇಳೆ ಪೂರ್ಣಗೊಂಡಿದೆ. ಸಾಕ್ಷಿ ದೂರುದಾರ ಗುರುತಿಸಿದ 13ನೇ ಸ್ಥಳದ ಸುತ್ತ ಮಾತ್ರವಲ್ಲದೇ, ನೇತ್ರಾವತಿ ಅಜಿಕುರಿ ರಸ್ತೆಯ ಸುಮಾರು ನೂರು ಮೀಟರ್ ಗೂ ಅಧಿಕ ದೂರದ ವರೆಗೂ ರಸ್ತೆ ಬದಿಯಲ್ಲಿ ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ ನಡೆಸಲಾಗಿದೆ. ಎಸ್ಐಟಿ ಹಿರಿಯ ಅಧಿಕಾರಿಗಳು, ಪುತ್ತೂರು ಸಹಾಯಕ ಆಯಕ್ತ ಸ್ಟೆಲ್ಲಾ ವರ್ಗೀಸ್ ಹಾಗೂ ಇತರ ತಜ್ಞ ಅಧಿಕಾರಿಗಳ ಸುಮಾರು 60 ಮಂದಿಯ ತಂಡ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಒಂದು ಹಂತದ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದ್ದು, ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಕ್ಯಾನಿಂಗ್ ವೇಳೆ ಏನು ಕಂಡು ಬಂದಿದೆ ಎಂಬುದು ಈ ಪರಿಶೀಲನೆಯಲ್ಲಿ ಸ್ಪಷ್ಟವಾಗಲಿದೆ. ಇದಾದ ಬಳಿಕ ಅಧಿಕಾರಿಗಳು ಕಾರ್ಯಾಚರಣೆಯ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಟಾಚಿಯನ್ನು ಕರೆಸಲಾಗಿದೆ.
ಸ್ಥಳಕ್ಕೆ ಎಸ್ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದರು. ಬಳಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವರು ವಾಪಸ್ಸಾದರು.