ಮೈಸೂರು: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶು ಇರುವೆ ಕಚ್ಚಿ ಮೃತಪಟ್ಟಿರುವ ಬಗ್ಗೆ ದೂರೊಂದು ಕೇಳಿಬಂದಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆ ವಿರುದ್ಧ ಮೃತ ಮಗುವಿನ ಪೋಷಕರು ಆರೋಪಿಸಿದ್ದು, ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಏಪ್ರಿಲ್ 15ರಂದು ಅವಧಿ ಪೂರ್ವ ಗಂಡು ಮಗುವಿನ ಜನನವಾಗಿತ್ತು. ಕೇವಲ 7 ತಿಂಗಳಿಗೆ ಹುಟ್ಟಿದ್ದ ಮಗು 1 ಕೆಜಿ 40 ಗ್ರಾಂ ಮಾತ್ರ ತೂಕ ಹೊಂದಿತ್ತು. ಈ ಹಿನ್ನೆಲೆ ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಇರುವೆ ಕಚ್ಚಿದೆ ಎಂದು ಪೋಷಕರು ಆರೊಪಿಸಿದ್ದಾರೆ. ತುಂಬಾ ಇರುವೆಗಳಿದ್ದ ಬಗ್ಗೆ ಪೋಷಕರು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಈ ಮೊದಲೇ ತಿಳಿಸಿದ್ದರು, ಆದರೆ ಸಿಹಿ ಕಾರಣಕ್ಕೆ ಒಂದೆರಡು ಇರುವೆಗಳು ಬಂದಿವೆ ಎಂದು ಅಲ್ಲಿನ ಸಿಬ್ಬಂಧಿಗಳು ಸಮಜಾಯಿಷಿ ಕೊಟ್ಟಿದ್ದಾರೆ. ಈಗ ನೋಡಿದರೆ ಮಗುವೇ ತೀರಿಕೊಂಡಿದೆ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ, ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಮೃತ ಮಗುವಿನ ಪೋಷಕರ ಆರೋಪಗಳನ್ನು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಅಲ್ಲಗಳೆದಿದ್ದಾರೆ. 21 ವಾರಕ್ಕೆ ಮಗು ಹುಟ್ಟಿದ್ದು, ಜನನದ ಸಂದರ್ಭ ಶಿಶು ಕೇವಲ 1 ಕೆಜಿ ಇತ್ತು. ಮಗು ಅಳುತ್ತಿಲ್ಲ ಎನ್ನುವ ಕಾರಣಕ್ಕೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೆವು. ಐಸಿಯುನಲ್ಲಿ ಚಿಕಿತ್ಸೆ ಹಿನ್ನೆಲೆ ಮಗುವಿನ ಕೈ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಿದ್ದೆವು. ಹೀಗಾಗಿ ಆ ಭಾಗದಲ್ಲಿ ಮಾರ್ಕ್ಗಳು ಉಂಟಾಗಿವೆ. ಕಳೆದ ಒಂದು ವಾರದಿಂದ ಮಗುವಿನ ಜೀವ ಉಳಿಸಲು ಪ್ರಯತ್ನ ಮಾಡಲಾಗಿದೆ. ನಮ್ಮ ಸಿಬ್ಬಂದಿಗಳಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಐಸಿಯುನಲ್ಲಿ ಗ್ಲೂಕೊಸ್ ಇರುವುದರಿಂದ ಒಂದೊಂದು ಇರುವೆ ಇರಬಹುದು. ಆದರೆ ಮಗುವಿನ ಪೋಷಕರು ಹೇಳುವಂತೆ ಇರುವೆ ಕಚ್ಚಿ ಸಾವು ಉಂಟಾಗಿಲ್ಲ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.



