ಚಿಕ್ಕಬಳ್ಳಾಪುರ: ಇಂದಿರಾ ಕಿಟ್ ಸೌಲಭ್ಯ ಮುಂದಿನ ಯುಗಾದಿ ಹಬ್ಬದ ವೇಳೆಗೆ ಪಡಿತರದಾರರಿಗೆ ಸಿಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್ ತಿಳಿಸಿದರು.
ಈ ಕುರಿತು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಕೊಟ್ಟರೆ ಒಂದು ಕುಟುಂಬಕ್ಕೆ 30 ರಿಂದ 40 ಕೆ.ಜಿ. ಅಕ್ಕಿ ಮಾಸಿಕ ಸಿಗುವುದರಿಂದ ಅಷ್ಟು ಪ್ರಮಾಣದ ಅಕ್ಕಿಯನ್ನು ಜನರು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಅಲ್ಲದೆ ಇದರಿಂದಾಗಿ ದುರ್ಬಳಕೆಗೆ ಅವಕಾಶವಾಗುತ್ತಿದೆ ಹಾಗಾಗಿ ಇದನ್ನು ತಪ್ಪಿಸಲು ಇಂದಿರಾಕಿಟ್ ವಿತರಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನೂ ಹೆಚ್ಚಿಗೆ ಅಕ್ಕಿ ದೊರೆಯುತ್ತಿರುವುದರಿಂದ ಕೆಲವರು ಅವಶ್ಯಕತೆಗಿಂತ ಹೆಚ್ಚಿಗೆ ಅನ್ನ ಮಾಡಿ ನಾಯಿಗಳಿಗೆ ಅನ್ನ ಹಾಕುವುದನ್ನು ನನ್ನ ಸ್ವಗ್ರಾಮದಲ್ಲೆ ಗಮನಿಸಿದ್ದೇನೆ. ಈ ಬಗ್ಗೆ ದೃಶ್ಯಾವಳಿ ಗಳನ್ನು ಮಾಡಿಕೊಂಡು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೂ ನಾನು ತಂದಿದ್ದೆ. ಇದನ್ನು ಪರಿಗಣಿಸಿದ ಸಮಿತಿಯು ಜನವರಿಯಿಂದಲೇ ಇಂದಿರಾ ಕಿಟ್ ಸೌಲಭ್ಯ ಜನರಿಗೆ ನೀಡಲು ನಿರ್ಧಾರ ಮಾಡಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬರುವ ಯುಗಾದಿಯಿಂದ ಇಂದಿರಾ ಕಿಟ್ ನ್ನು ಸಾರ್ವಜನಿಕರಿಗೆ ವಿತರಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಸಮಿತಿಯು ನಿರ್ಧರಿಸಿದೆ ಅದರಂತೆ ಯುಗಾದಿಗೆ ಈ ಸೌಲಭ್ಯ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳು ಶೇ.100ರಷ್ಟು ಪ್ರಗತಿಯನ್ನು ಸಾಧಿಸಬೇಕು. ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಉತ್ತಮ ಪ್ರಗತಿ ಸಾಧಿಸಬೇಕು. ಕೆಲವು ಯೋಜನೆಗಳಲ್ಲಿ ಪ್ರಗತಿ ಸಾಧಿಸಿದ್ದರೂ ಸಹ ಜನರ ಅರಿವಿಗೆ ಬಾರದಿರುವುದು ವಿಷಾದನೀಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಗೃಹಲಕ್ಷ್ಮಿ ಯೋಜನೆ ಎಂದರು.
ಒಟ್ಟಾರೆ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮವಾಗಿ ಜಾರಿಯಾಗಿ ಜನರ ಮನಸೂರೆ ಗೊಂಡಿವೆ. ಈ ಎಲ್ಲ ಉಪಕ್ರಮಗಳನ್ನು ಹೊರತು ಪಡಿಸಿ ಯಾವುದೇ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅರ್ಹ ಫಲಾನುಭವಿಯು ವಂಚಿತರಾಗಿದ್ದಲ್ಲಿ ಅಂತಹವರನ್ನು ಈ ಯೋಜನೆಗಳ ವ್ಯಾಪ್ತಿಗೆ ತರಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಇನ್ನೂ ಈ ವೇಳೆ ಈವರೆಗೆ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಯೋಜನೆಗಳನ್ನು ಪಡೆದುಕೊಳ್ಳುವಂತೆ ಗ್ಯಾರಂಟಿ ಯೋಜನೆ ಜಾರಿಯ ಅಧ್ಯಕ್ಷರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ರಾಮಕೃಷ್ಣಪ್ಪ, ಸದಸ್ಯರಾದ ಮಧುಸೂದನ್ ರೆಡ್ಡಿ, ಮುನಿನಾರಾಯಣಪ್ಪ, ಚೆಲ್ಲಂ, ಎಂ.ಕೆ ವೇಣುಗೋಪಾಲ್, ಹೆಚ್.ಎಂ. ಮುನಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.



