Wednesday, May 21, 2025
Google search engine

Homeಸ್ಥಳೀಯದಿನೇಶ್ ಗೂಳಿಗೌಡ ಪತ್ರಕ್ಕೆ ಡಿ ಕೆ ಶಿವಕುಮಾರ್ ಸ್ಪಂದನೆ: ಪ್ರತಿ ತಿಂಗಳು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ...

ದಿನೇಶ್ ಗೂಳಿಗೌಡ ಪತ್ರಕ್ಕೆ ಡಿ ಕೆ ಶಿವಕುಮಾರ್ ಸ್ಪಂದನೆ: ಪ್ರತಿ ತಿಂಗಳು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ  ತಲುಪಲಿದೆ ಗೃಹಲಕ್ಷ್ಮಿ ಯೋಜನೆ ಹಣ

ಮೈಸೂರು: ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ 2 ಸಾವಿರ ಅರ್ಪಿಸುವ ಸಲುವಾಗಿ ಶಾಸಕ ದಿನೇಶ್ ಗೂಳಿಗೌಡ ಅವರ ಪತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸೂಚನೆ ನೀಡಿದ್ದಾರೆ.

ಉಪಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ರವರಿಗೆ ಪತ್ರ ಬರೆದು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಮುನ್ನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಎರಡು ಸಾವಿರ ರೂಪಾಯಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಜಮೆ ಮಾಡಲು ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.

ಮನವಿ ಪತ್ರಕ್ಕೆ ತಕ್ಷಣ ಸ್ಪಂದಿಸಿರುವ ಡಿ ಕೆ ಶಿವಕುಮಾರ್ ಲಕ್ಷ್ಮಿ ಹೆಬ್ಬಾಳ್ಕರ ರವರಿಗೆ ತಮ್ಮ ಇಲಾಖೆಯಿಂದ ಅಥವಾ ವಯಕ್ತಿಕವಾಗಿ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ದೇವಿಗೆ ಜಮೆ ಮಾಡಲು ಸೂಚನೆ ನೀಡಿದ್ದಾರೆ.

ಮನವಿ ಪತ್ರದಲ್ಲೇನಿದೆ ?

ರಾಜ್ಯ ಕಾಂಗ್ರೆಸ್ ಸರ್ಕಾರದ ಜಾರಿಗೆ ತಂದ ಗೃಹ ಲಕ್ಷ್ಮೀ ಯೋಜನೆ ಜನರಿಗೆ ಅತ್ಯಂತ ಉಪಕಾರಿಯಾಗಿದೆ. ಚುನಾವಣೆಗೂ ಪೂರ್ವ ಕಾಂಗ್ರೆಸ್ ಪಕ್ಷದ ವತಿಯಿಂದ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ಪಕ್ಷದ ಐದು ಗ್ಯಾರಂಟಿಗಳ ಕಾರ್ಡ್ ಅನ್ನು ಇಟ್ಟು ದೇವಿಯ ಬಳಿ, ಶಕ್ತಿ ಕೊಡು ಎಂದು ಕೋರಿಕೆಯನ್ನಿಡಲಾಗಿತ್ತು. ಆ ಸಂದರ್ಭದಲ್ಲಿ ಹರಕೆಯನ್ನು ನಾಡದೇವತೆ ಬಳಿ ಮಾಡಿಕೊಳ್ಳಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ, ಗ್ಯಾರಂಟಿ ಈಡೇರಿಸುವ ವಾಗ್ದಾನವನ್ನೂ ಮಾಡಲಾಗಿತ್ತು. 

ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಪರಿಣಾಮ 135 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಪಡೆದು ಈಗ ಜನಪರ ಜನಪ್ರಿಯ ಆಡಳಿತವನ್ನು ನೀಡುತ್ತಿದೆ. ಇದಕ್ಕೆ ಕಾರಣವಾಗಿರುವ, ಆಶೀರ್ವಾದ ನೀಡಿ ಹರಸಿರುವ ಜಗನ್ಮಾತೆ ಚಾಮುಂಡೇಶ್ವರಿಗೆ ಮೈಸೂರಿನಲ್ಲಿ ಪೂಜೆ ಸಲ್ಲಿಸಿ  ಆಗಸ್ಟ್ 30 ರಂದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ  ಗೃಹಲಕ್ಷ್ಮಿ ಯೋಜನೆಗೆ ಚಾಲನೆ  ನೀಡಲಾಗಿತ್ತು. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.

ಅಂದು ಹರಕೆಯನ್ನು ತೀರಿಸಲು ಮುಖ್ಯಮಂತ್ರಿಗಳಾದ ತಾವು ಕೆಪಿಸಿಸಿ ಅಧ್ಯಕ್ಷರಾದ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹಾಗೂ ಶಾಸಕರ ಜೊತೆ ದೇಗುಲಕ್ಕೆ  ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಮಾತ್ರವಲ್ಲ ಗೃಹ ಲಕ್ಷ್ಮಿಯರಿಗೆ ನೀಡುವ 2 ಸಾವಿರ ರೂ.ಗಳನ್ನು ದೇವಿಗೆ ಸಲ್ಲಿಸಲಾಗಿತ್ತು.

ಈಗ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ರಾಜ್ಯದ 1.2 ಕೋಟಿಗೂ ಅಧಿಕ ಕುಟುಂಬಗಳಿಗೆ  ಜಮಾ ಮಾಡಲಾಗುತ್ತಿದೆ. ಆ ಹಣದಿಂದ ಸಾಕಷ್ಟು ಬಡ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೊಂಡಿದೆ. ಅಲ್ಲದೆ, ನಮ್ಮ ಸರ್ಕಾರದ ಹಾಗೂ ತಮ್ಮಗಳ ಬಗ್ಗೆ ಶುಭ ಹಾರೈಕೆಯನ್ನು ಮಾಡುತ್ತಲೇ ಇದ್ದಾರೆ.

ಈಗ ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ನಿಖರವಾಗಿ ತಲಾ 2 ಸಾವಿರ ರೂ. ಹಣ ಜಮಾ ಆಗುತ್ತಿರುವುದು ಖುಷಿಯ ವಿಚಾರವಾಗಿದೆ. ಅದೇ ರೀತಿ ಪ್ರತಿ ತಿಂಗಳ ಕಂತನ್ನು ಯಜಮಾನಿಯರಿಗೆ ಪಾವತಿಸುವ ಮೊದಲು ನಾಡದೇವಿ ಚಾಮುಂಡೇಶ್ವರಿಯ ಸನ್ನಧಿಗೂ ಸಲ್ಲಿಸಬೇಕು. ಆ ಮೂಲಕ ಮೊದಲ ಹಣ ನಾಡದೇವತೆಗೆ ಸಲ್ಲಿಕೆಯಾಗಿ ಬಳಿಕ ಉಳಿದವರಿಗೆ ಪಾವತಿಯಾಗುವಂತೆ ವ್ಯವಸ್ಥೆ ಮಾಡಲು ಕೋರಲಾಗಿತ್ತು.

RELATED ARTICLES
- Advertisment -
Google search engine

Most Popular