ಬೆಳಗಾವಿ: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮುನಿರತ್ನ ನಾಯ್ಡು ನಡುವಿನ ಮುನಿಸು ವಿಧಾನಸಭೆಯಲ್ಲಿ ಪರೋಕ್ಷವಾಗಿ ಬಹಿರಂಗಗೊಳ್ಳುತ್ತಲೇ ಇರುತ್ತದೆ ಇದೀಗ ಬೆಳಗಾವಿ ಅಧಿವೇಶನದಲ್ಲೂ ಇದು ವ್ಯಕ್ತವಾಗಿದೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಮುನಿರತ್ನ ನಡುವಿನ ಮಾತು ಸದನದಲ್ಲಿ ಗಮನ ಸೆಳೆದಿದ್ದು, ಈ ವೇಳೆ ಜಾಲಹಳ್ಳಿ ಕ್ರಾಸ್ ಬಳಿ ಅಂಡರ್ ಪಾಸ್ ಕಾಮಗಾರಿ ಆರಂಭವಾಗದ ಬಗ್ಗೆ ಎಸ್ ಮುನಿರಾಜು ಪ್ರಶ್ನೆ ಕೇಳಿದರು.
ಈ ಬಗ್ಗೆ ಅಂಡರ್ ಪಾಸ್ ಕಾಮಗಾರಿ ಮಾಡಲು ಜಾಗ ವಶಕ್ಕೆ ಪಡೆದಿದ್ದಾರೆ. ಹತ್ತು ಜನರಿಗೆ ಪರಿಹಾರ ನೀಡಿದ್ದಾರೆ. ಆದರೆ ಇನ್ನೂ 26 ಸ್ವತ್ತು ಮಾಲೀಕರಿಗೆ ಅನುದಾನ ನೀಡಿಲ್ಲ. ಕಾಮಗಾರಿ ಇನ್ನೂ ಆರಂಭ ಮಾಡಿಲ್ಲ. ಕಾಮಗಾರಿ ಮಾಡಿ ಪೂರ್ಣ ಮಾಡಿದ್ದರೆ, ಡಿಸಿಎಂ ಕರೆದುಕೊಂಡು ಹೋಗಿ ಸನ್ಮಾನ ಮಾಡುತ್ತೇವೆ ಎಂದು ಡಿಸಿಎಂ ಕಾಲೆಳೆದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಮುನಿರತ್ನ, ಈ ಟೆಂಡರ್ ಸಂಪೂರ್ಣ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಸೇರಿದ್ದು. ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಮಾಡಿದ್ದು. ನಮ್ಮ ಕ್ಷೇತ್ರದಲ್ಲಿ ಆರೇಳು ಅಂಡರ್ ಪಾಸ್ ಕಾಮಗಾರಿ ನಿಂತಿದೆ. ಕಾಮಗಾರಿ ನಿಂತಿದ್ದೇಕೆ ಉತ್ತರ ಕೊಡಿ ಎಂದು ಮುನಿರತ್ನ ಆಗ್ರಹಿಸಿದರು. ಇದಕ್ಕೆ ಪ್ರಶ್ನೆ ಕೇಳಿರೋರು ಉತ್ತರ ಕೇಳಲಿ ಎಂದು ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಒಂದು ಫುಟ್ ಪಾತ್ ಅವರಿಗೆ, ಒಂದು ಫುಟ್ ಪಾತ್ ನನಗೆ ಬರುತ್ತದೆ ಎಂದು ಮುನಿರತ್ನ ಉತ್ತರಿಸಿದರು.
ಈ ವೇಳೆ ಮಿಸ್ಟರ್ ಮುನಿ ಎಂದು ಕರೆದ ಡಿಕೆಶಿ, ಮುನಿರಾಜು ಅವರಿಗೆ ಉತ್ತರ ಕೊಟ್ಟ ಬಳಿಕ ನಿಮಗೆ ಉತ್ತರಿಸುತ್ತೇನೆ ಎಂದರು. ಈ ವೇಳೆ ಆಯ್ತು ಸಾರ್ ಎಂದು ಸುಮ್ಮನಾದರು. ಡಿಕೆ ಶಿವಕುಮಾರ್ vs ಮುನಿರತ್ನ ಜಟಾಪಟಿ ಸದನದ ಗಮನ ಸೆಳೆಯಿತು. ರಸ್ತೆ ಅಂಡರ್ ಪಾಸ್ ದುರಸ್ತಿ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಪ್ರಶ್ನೆಯನ್ನು ಬೇಗ ಕೇಳಿ ಮುಗಿಸಿ ಎಂದು ಸ್ಪೀಕರ್ ಖಾದರ್ ಕೊಟ್ಟ ಸೂಚನೆಗೆ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಮುನಿರಾಜು ಅಸಮಾಧಾನಗೊಂಡ ಪ್ರಸಂಗ ನಡೆಯಿತು ಎನ್ನಲಾಗಿದೆ.
ಸದನದಲ್ಲಿ ನಾನು ಮೂರನೇ ಬಾರಿ ಆಯ್ಕೆಯಾಗಿ ಬಂದಿದ್ದೇನೆ. ಯಾರು ಯಾವ ವಿಚಾರವಾಗಿ ಎಷ್ಟು ಬಾರಿ ಮಾತನಾಡಿದ್ದೇನೆ ಎಂಬುವುದನ್ನು ನಾನೂ ನೋಡಿದ್ದೇನೆ. ಅಲ್ಲಿ ಕೂತಾಗ ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಅವರು ಸರ್ಕಾರಕ್ಕೆ ಯಾವ ರೀತಿಯಲ್ಲಿ ಕಿವಿ ಹಿಂಡುತ್ತಿದ್ದರು ಎಂಬುದನ್ನು ನೋಡಿದ್ದೇನೆ. ನನಗೆ ಮಾತನಾಡಲು ಬಿಡಲ್ಲ ಅಂತೀರಾ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಕೆಲವು ದಿನಗಳ ಹಿಂದೆ ಮುನಿರತ್ನ ಅವರು ಡಿಕೆಶಿ ಮಾಟ ಮಾಡಿಸಿದ್ದರಿಂದ ಸಿದ್ದರಾಮಯ್ಯ ಮಂಕಾಗಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದು, ಈ ಹೇಳಿಕೆಗಳು ಇಬ್ಬರೂ ನಾಯಕರ ನಡುವಿನ ರಾಜಕೀಯ ವೈಷಮ್ಯವನ್ನು ಪದೇ ಪದೇ ಸಾಬೀತುಪಡಿಸುತ್ತವೆ ಎಂದಿದ್ದಾರೆ.



