ಬೆಂಗಳೂರು : ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಕಾಣಿಸಿಕೊಂಡು, ತಮಗೆ ಎದುರಾಗಿ ನಿಂತಿರುವ ಸಚಿವ ಮತ್ತು ಶಾಸಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್‌ಗೆ ವರದಿ ನೀಡಿದ್ದಾರೆ. ನಿನ್ನೆ ದೆಹಲಿಗೆ ಭೇಟಿ ನೀಡಿದ್ದ ಡಿ.ಕೆ.ಶಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅದರಲ್ಲೂ ಸಂಘಟನಾತ್ಮಕ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನ ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ.
ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಹಕರಿಸದ ಶಾಸಕರು ಮತ್ತು ಸಚಿವರ ಪಟ್ಟಿಯನ್ನು ಹೈಕಮಾಂಡ್ ಗೆ ಸಲ್ಲಿಸಿದ್ದು, ಇವರು ಪಕ್ಷದಿಂದ ಲಾಭ ಪಡೆದಿದ್ದಾರೆ. ಆದರೆ ಪಕ್ಷಕ್ಕೆ ಅವರ ಕೊಡುಗೆ ನಿರಾಶಾದಾಯಕ ಎಂದು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮತಗಳ್ಳತನದ ವಿರುದ್ಧ ಪ್ರತಿಭಟನೆ ನಡೆಸಿದಾಗ, ಸದಸ್ಯತ್ವ ನೋಂದಣಿ ಸೇರಿದಂತೆ ಕಾಂಗ್ರೆಸ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಬೆಂಬಲಿಸಬೇಕು ಎಂದು ವರಿಷ್ಠ ನಾಯಕರು ಪಕ್ಷದ ಶಾಸಕರು ಮತ್ತು ಸಚಿವರಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಬಹಳಷ್ಟು ಮಂದಿ ಶಾಸಕರು ಮತ್ತು ಸಚಿವರು ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳದೆ ಅನಾದರಣೆ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಉಡಾಫೆಯ ಶಾಸಕರು ಹಾಗೂ ಸಚಿವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಅದನ್ನು ಲೆಕ್ಕಿಸದೆ ತಮ್ಮ ಧೋರಣೆಯನ್ನು ಮುಂದುವರಿಸಿದ್ದಾರೆ. ಮುಂದಿನ ಸಚಿವ ಸಂಪುಟ ಪುನರ್ ರಚನೆಯ ವೇಳೆಯಲ್ಲಿ ಅಂತಹವರನ್ನು ಕೈಬಿಡಬೇಕು. ಶಾಸಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಪಟ್ಟಿ ಸಂಪುಟದಲ್ಲಿನ ಬಹಳಷ್ಟು ಸಚಿವರಿಗೆ ನಡುಕ ಹುಟ್ಟಿಸಿದೆ. ಸಚಿವ ಸಂಪುಟ ವಿಸ್ತರಣೆಯಾಗಲೇಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರೆ, ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಪಟ್ಟಿ ಬ್ರಹಾಸ್ತ್ರವಾಗಲಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ಸಚಿವರನ್ನು ವಜಾ ಗೊಳಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೂ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಪಟ್ಟಿಯಲ್ಲಿ ಪ್ರಭಾವಿ ಮತ್ತು ಸಿದ್ದರಾಮಯ್ಯ ಅವರ ಆಪ್ತ ಸಚಿವರ ಹೆಸರುಗಳಿವೆ ಎಂದು ಕೇಳಿ ಬರುತ್ತಿದೆ.
ಇನ್ನೂ ಡಿಕೆಶಿ ದೆಹಲಿ ಪ್ರವಾಸ ಮಹತ್ವದ ಬೆಳವಣಿಗೆ ಎನ್ನಲಾಗಿದ್ದು, ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿಗಳನ್ನು ನಿಭಾಯಿಸುವ ಬದಲಿಗೆ ಪರ-ವಿರೋಧ ಚರ್ಚೆ ಮಾಡುತ್ತಾ ರಾಜಕೀಯ ಗೊಂದಲಗಳನ್ನು ಮೂಡಿಸುತ್ತಿದ್ದ ಸಚಿವರಿಗೆ ಮತ್ತು ಶಾಸಕರಿಗೆ ಈ ಮೂಲಕ ಡಿಕೆಶಿ ಟಾಂಗ್ ನೀಡಲಾರಂಭಿಸಿದ್ದಾರೆ.



