ರಾಮನಗರ: ಲೋಕಸಭಾ ಚುನಾವಣೆ-೨೦೨೪ರಲ್ಲಿ ಪ್ರತಿಯೊಬ್ಬ ಮತದಾರರು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುವಂತೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ-೨೦೨೪ರ ಕುರಿತಂತೆ ಮತದಾರರ ಜಾಗೃತಿಗಾಗಿ ವಿಕಲಚೇತನರಿಂದ ಮತದಾರರ ಜಾಗೃತಿಗಾಗಿ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಮಿಷಗಳಿಗೆ ಒಳಗಾಗದೇ ತಪ್ಪದೇ ಮತ ಚಲಾಯಿಸಿ, ಮತದಾನ ಪವಿತ್ರವಾದ ಕಾರ್ಯ, ಮತದಾನ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ೧೮ ವರ್ಷ ಮೇಲ್ಪಟ್ಟ ಎಲ್ಲರು ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ರ್‍ಯಾಲಿಯಲ್ಲಿ ಮತದಾನ ನನ್ನ ನಾಡು ನನ್ನ ದೇಶದ ಹೆಮ್ಮೆಯ ಪ್ರತೀಕ, ಮತದಾನ ಪ್ರಜಾಪ್ರಭುತ್ವದ ಪರಮ ಗುರಿ, ಮತದಾನ ಪವಿತ್ರ ದಾನ, ನಿಮ್ಮ ಮತ ನಾಡಿಗೆ ಹಿತ ಎಂಬ ಘೋಣೆಗಳೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿ ಆವರಣದಿಂದ ತಾಲ್ಲೂಕು ಆಡಳಿತ ಸೌಧದ ವರೆಗೆ ಜಾಥಾವನ್ನು ಆಯೋಜಿಸಲಾಗಿತ್ತು.
ಮತದಾನ ಜಾಗೃತಿ ರಾಯಭಾರಿ ಪ್ರಕಾಶ್ ಜಯರಾಮಯ್ಯ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಜನಿ, ಯೋಜನಾ ಸಹಾಯಕಿ ಶೃತಿ ಆರ್ ಹಾಗೂ ಇತರರು ಉಪಸ್ಥಿತರಿದ್ದರು. ವಿಕಲಚೇತನರು ಬೈಕ್ ರ್‍ಯಾಲಿಯಲ್ಲಿಭಾಗವಹಿಸಿದ್ದರು.