ವರದಿ: ಸ್ಟೀಫನ್ ಜೇಮ್ಸ್.
- ಸೌತ್ ಪವರ್ಲಿಸ್ಟ್ನಲ್ಲಿ ಸ್ಥಾನ *ಉದ್ಯಮ ರಂಗದ ಕೊಡುಗೆಗಾಗಿ ಪುರಸ್ಕಾರ* ದುಬೈನಲ್ಲಿ ಪ್ರದಾನ
ದುಬೈ: ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರಿಗೆ ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ಸ್ ಪುರಸ್ಕಾರ ಸಂದಿದ್ದು, ದುಬೈನಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.
ದುಬೈನ ಅಲ್ ಹಬ್ತೂರ್ ಪ್ಯಾಲೇಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಯುಎಇ ರಾಯಭಾರಿ ಹಾಗೂ ಎಎಜಿ ಚೇರ್ಮನ್ ಡಾ. ಅಹ್ಮದ್ ಅಬ್ದುಲ್ ರೆಹಮಾನ್ ಅಲ್ಬನ್ನಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ, ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ಸ್ ಪರಿಚಯಿಸಿರುವ ಸೌತ್ ಪವರ್ಲಿಸ್ಟ್-100 ಅನ್ನು ಅನಾವರಣಗೊಳಿಸಲಾಯಿತು.
ವಿಆರ್ಎಲ್ ಸಮೂಹದ ಎಂಡಿ ಡಾ. ಆನಂದ ಸಂಕೇಶ್ವರ ಅವರು 2025ರ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ. ವಿಆರ್ಎಲ್ ಸಂಸ್ಥೆಯನ್ನು ದೇಶದ ಅತಿ ದೊಡ್ಡ ಸಾರಿಗೆ ಕಂಪನಿಯಾಗಿ, ಪ್ರಮಾಣ ಹಾಗೂ ಕಾರ್ಯಾಚರಣೆ ದಕ್ಷತೆಯಲ್ಲಿ ಅತ್ಯಂತ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸಿದ್ದಾರೆ. ಈ ಗೌರವ ಕೇವಲ ವ್ಯಾಪಾರದ ಯಶಸ್ಸನ್ನು ಮಾತ್ರವಲ್ಲ ಲಾಜಿಸ್ಟಿಕ್ಸ್ ಮೂಲಕ ಬೆಳವಣಿಗೆ ಮತ್ತು ದೇಶದ ಏಕೀಕರಣದಲ್ಲಿ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ಸೌತ್ ಪವರ್ಲಿಸ್ಟ್ 100 ರಲ್ಲಿ ಇರುವ ಹಲವು ರಂಗಗಳ ಸಾಧಕರನ್ನೂ ಗೌರವಿಸಲಾಯಿತು. ಈ ಪಟ್ಟಿಯು ಉದ್ಯಮಗಳು ಮತ್ತು ಪರಂಪರೆಯಲ್ಲಿ ನಾಯಕತ್ವದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ ಈ ಗೌರವಾನ್ವಿತರು ಜಾಗತಿಕ ವೇದಿಕೆಯಲ್ಲಿ ದಣ ಭಾರತದ ದೂರದೃಷ್ಟಿ ಮತ್ತು ಚೈತನ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಎಸ್ಐಬಿಎ ಹೇಳಿದೆ.
ಇತರ ಪ್ರಮುಖ ಪುರಸ್ಕೃತರು:
ಅಶೋಕ್ ಖೇಣಿ- ಆಡಳಿತ ನಿರ್ದೇಶಕರು, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೆಸಸ್ ಲಿಮಿಟೆಡ್.
ಕವಿತಾ ದತ್ತ – ಜಂಟಿ ಆಡಳಿತ ನಿರ್ದೇಶಕರು, ಕೆಸಿಪಿ ಸಿಮೆಂಟ್ಸ್.
ನಿರೂಪ್ ರೆಡ್ಡಿ – ಸಂಸ್ಥಾಪಕರು, ಎನ್ಎ ಆರ್ಕಿಟೆಕ್ಟ್ಸ್
ಶೈಲಜಾ ಕಿರಣ್ -ಆಡಳಿತ ನಿರ್ದೇಶಕರು, ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ – ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು- ಕೊಡಗು ಲೋಕಸಭೆ ಕ್ಷೇತ್ರದ ಸದಸ್ಯರು