ರಾಮನಗರ: ರೈತರು ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ. ಬಾಬು ಜಗಜೀವನ್ ರಾಮ್ ರವರು. ಹಸಿರು ಕ್ರಾಂತಿಯ ಹರಿಕಾರ, ಹಸಿವು ನೀಗಿಸಿದ ವ್ಯಕ್ತಿ, ಇವರ ಆದರ್ಶ ಮಾರ್ಗಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕರಾದ ಮುತ್ತುಕುಮಾರ್ ಅವರು ತಿಳಿಸಿದರು.
ಅವರು ಇಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಗಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಮತ್ತು ಭಾರತ ದೇಶದ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ೧೧೭ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ಬಾಬು ಜಗಜೀವನ್ ರಾಮ್ ರವರು ರಕ್ಷಣ ಸಚಿವರಾಗಿ, ಕಾನೂನು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ದೇಶದಲ್ಲಿ ಅನ್ನದ ಆಹಾಕಾರವಿದ್ದ ಸಂದರ್ಭದಲ್ಲಿ ಕೃಷಿ ಸಚಿವರಾಗಿ ಹೊರ ದೇಶದಿಂದ ವಿಶೇಷ ತಳಿಗಳನ್ನು ತಂದು ಸಂಶೋದನೆ ನಡೆಸಿ ಆಹಾರವನ್ನು ದುಪ್ಪಟ್ಟು ಮಾಡಿದರು ಎಂದು ತಿಳಿಸಿದರು.
ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರು ರೈಲ್ವೆ, ಆಹಾರ ಮತ್ತು ಕೃಷಿ, ಸಾರಿಗೆ ಮತ್ತು ಸಂವಹನ ನೀರಾವರಿ ಮತ್ತು ರಕ್ಷಣೆ ಸೇರಿದಂತೆ ಇತರ ಖಾತೆಗಳನ್ನು ಹೊಂದಿದ್ದರು ಎಂದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.
ಮೆರವಣಿಗೆ: ಡಾ. ಬಾಬು ಜಗಜೀವನ್ ರಾಮ್ ರವರ ೧೧೭ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಿಂದ ಏರ್ಪಡಿಸಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.

ಮೆರವಣಿಗೆಯು ನಗರದ ಕ್ರೀಡಾಂಗಣದಿಂದ ಪ್ರಾರಂಭಿಸಿ ನಗರದ ಪ್ರಮುಖ ವೃತ್ತಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದ ವರೆಗೆ ಮೆರವಣಿಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜದೇವಿ, ಸಮುದಾಯದ ಮುಖಂಡರುಗಳಾದ ಶಿವಲಿಂಗಯ್ಯ, ಚಲುವರಾಜು, ಶಿವಶಂಕರ್, ಕಿರಣ್‌ಕುಮಾರ್, ಶಿವಣ್ಣ, ಮೂರ್ತಿ ನಾಯಕ್, ಶಿವಪ್ರಸಾದ್, ಪುರುಷೋತ್ತಮ್, ರಾಮಕೃಷ್ಣಪ್ಪ, ಹೊಳಸಾಲಯ್ಯ ಹಾಗೂ ಇತರರು ಉಪಸ್ಥಿತರಿದ್ದರು.