ಬೆಂಗಳೂರು: ನಗರದ ಕೆಜಿ ರಸ್ತೆಯಲ್ಲಿರುವ ಸರ್ ಎಂವಿ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 15 ರಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ಆಯೋಜಿಸಲಾಗಿದ್ದ “ಸಂಸ್ಥಾಪಕರ ದಿನಾಚರಣೆ” ಕಾರ್ಯಕ್ರಮದಲ್ಲಿ 2025ನೇ ಸಾಲಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಮೆಮೊರಿಯಲ್ ಪ್ರಶಸ್ತಿ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಸದ ಹಾಗೂ ಹೆಸರಾಂತ ಹೃದಯ ತಜ್ಞರಾದ ಡಾ. ಮಂಜುನಾಥ್ ಅವರು, ಮೋಕ್ಷಗುಂಡ ಎಂ. ವಿಶ್ವೇಶ್ವರಯ್ಯರವರಿಗೆ ನಮನ ಸಲ್ಲಿಸಿದರು. ಅವರು ಕೇವಲ ಎಂಜಿನಿಯರ್ ಮಾತ್ರವಲ್ಲದೆ, ದೃಷ್ಟಿಯುತ ನಾಯಕ ಮತ್ತು ಶಿಸ್ತಿನ ನಿರ್ವಾಹಕರಾಗಿದ್ದರು ಎಂದು ವರ್ಣಿಸಿದರು. ತಂತ್ರಜ್ಞಾನವನ್ನು ನೈತಿಕತೆ ಹಾಗೂ ರಾಷ್ಟ್ರನಿರ್ಮಾಣದ ಆದರ್ಶಗಳೊಂದಿಗೆ ಒಗ್ಗೂಡಿಸಲು ಅಗತ್ಯವಿದೆ ಎಂದರು.
ಅವರು ದೇಶದ ಆರೋಗ್ಯ ಸಮಸ್ಯೆಗಳತ್ತ ಗಮನಹರಿಸಿ, ರೋಗ ತಡೆಗೆ ಉತ್ತಮ ನಗರ ಯೋಜನೆ, ಮಾಲಿನ್ಯ ನಿಯಂತ್ರಣ ಮತ್ತು ಶುದ್ಧ ಪರಿಸರ ಅಗತ್ಯವಿದೆ ಎಂದು ಹೇಳಿದರು. “ಶುದ್ಧ ಗಾಳಿ, ಶುದ್ಧ ನೀರು ಮತ್ತು ಕಲಬೆರಕೆಯಿಲ್ಲದ ಆಹಾರವು ಆರೋಗ್ಯದ ಮೂಲ” ಎಂದು ತಿಳಿಸಿದರು.
ಭಾರತದಲ್ಲಿ ಧೂಮಪಾನದಿಂದ ವರ್ಷಕ್ಕೆ 14 ಲಕ್ಷ ಮತ್ತು ವಾಯು ಮಾಲಿನ್ಯದಿಂದ 22 ಲಕ್ಷ ಸಾವುಗಳು ಸಂಭವಿಸುತ್ತಿವೆ ಎಂಬ ಅಂಕಿ ಅಂಶಗಳನ್ನು ಅವರು ಪ್ರಸ್ತಾಪಿಸಿದರು. “ಇವು ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಹೊರೆ ಹಾಕುತ್ತಿವೆ” ಎಂದು ಎಚ್ಚರಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಐದು ತತ್ವಗಳು — ಸಮಗ್ರತೆ, ಬುದ್ಧಿವಂತಿಕೆ, ಏಕೀಕರಣ, ವಿಕಸನ ಮತ್ತು ನಾವೀನ್ಯತೆ — ಇಂದಿಗೂ ಪ್ರಸ್ತುತವೆಂದು ಅವರು ಅಭಿಪ್ರಾಯಪಟ್ಟರು.
“ಸರ್ ಎಂ. ವಿಶ್ವೇಶ್ವರಯ್ಯನಂಥ ನಾಯಕರಿಂದ ಸ್ಫೂರ್ತಿ ಬರುತ್ತದೆ, ಆದರೆ ದೃಢನಿಶ್ಚಯ ನಮ್ಮ ಜವಾಬ್ದಾರಿ. ಎಂಜಿನಿಯರ್ ಗಳು ಮತ್ತು ಆರೋಗ್ಯ ವೃತ್ತಿಪರರು ಮೂಲಸೌಕರ್ಯವನ್ನು ಮಾತ್ರವಲ್ಲದೆ, ಆರೋಗ್ಯಕರ, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಭಾರತವನ್ನು ನಿರ್ಮಿಸಲು ಕೈಜೋಡಿಸಬೇಕು” ಎಂದು ಸಂಸದ ಮಂಜುನಾಥ್ ಮನವಿ ಮಾಡಿದರು.
ಇದಲ್ಲದೆ, ಭಾರತದಲ್ಲಿ ಶೇ.60 ರಷ್ಟು ಸಾವುಗಳು ಜೀವನಶೈಲಿ ಸಂಬಂಧಿತ ಕಾಯಿಲೆಗಳಾದ ಹೃದಯಾಘಾತ, ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್ ಹಾಗೂ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಒಂಟಿತನಕ್ಕೆ ಸಂಬಂಧಿಸಿದ ಮಾನಸಿಕ ಅಸ್ವಸ್ಥತೆಗಳಿಂದ ಉಂಟಾಗುತ್ತಿವೆ ಎಂದು ಎಚ್ಚರಿಸಿದರು. “ಸದ್ದಿಲ್ಲದೆ ಕಾಡುತ್ತಿರುವ ಈ ಸಾಂಕ್ರಾಮಿಕ ರೋಗವನ್ನು ಪರಿಹರಿಸದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, FKCCI ಚುನಾಯಿತ ಅಧ್ಯಕ್ಷೆ ಉಮಾ ರೆಡ್ಡಿ ಹಾಗೂ ಅನೇಕ FKCCI ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.