ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಕುಡಿಯುವ ನೀರಿನ ಮೂಲಗಳಲ್ಲಿ ಒಂದಾದ ಮುನಕ್ ಕಾಲುವೆಗೆ ಹರಿಯಾಣ ಅಸಮರ್ಪಕವಾಗಿ ನೀರು ಹರಿಸುತ್ತಿದ್ದು, ದೆಹಲಿಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಚರ್ಚಿಸಲು ತುರ್ತು ಸಭೆಗೆ ಸಮಯ ಕೋರಿ ದೆಹಲಿ ರಾಜ್ಯ ಜಲ ಸಚಿವೆ ಅತಿಶಿ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರಿಗೆ ಮನವಿ ಮಾಡಿದ್ದಾರೆ.
ನೀರಿನ ಸಮಸ್ಯೆ ಮತ್ತು ಗರ್ವರ್ನರ್‌ರಿಂದ ಸಮಯ ಕೋರಿರುವ ಬಗ್ಗೆ ಅತಿಶಿ ಟ್ವೀಟ್ ಮಾಡಿದ್ದಾರೆ. ದೆಹಲಿಗೆ ನೀರಿನ ಪೂರೈಕೆಗಾಗಿ ಮುನಕ್ ಕಾಲುವೆಯಿಂದ ದಿನನಿತ್ಯ ೧,೦೫೦ ಕ್ಯೂಸೆಕ್ ನೀರನ್ನು ಪಡೆಯಬೇಕಾಗಿತ್ತು. ಆದರೆ, ಹರಿಣಾಮವು ಕಾಲುವೆಗೆ ಕೇವಲ ೮೪೦ ಕ್ಯೂಸೆಕ್ ನೀರನ್ನು ಹರಿಸುತ್ತಿದೆ ಎಂದು ಹೇಳಿದ್ದಾರೆ. ಹರಿಯಾಣ ಸರ್ಕಾರವು ಮುನಕ್ ಕಾಲುವೆಗೆ ಅಸಮರ್ಪಕವಾಗಿ ನೀರು ಹರಿಸುತ್ತಿರುವ ಬಗ್ಗೆ ತಿಳಿಸಲು ತುರ್ತು ಸಭೆಗೆ ಗವರ್ನರ್ ಅವರಲ್ಲಿ ಸಮಯ ಕೋರಿದ್ದೇನೆ ಎಂದಿದ್ದಾರೆ.
ಮುನಕ್ ಕಾಲುವೆಯಿಂದ ಸಿಎಲ್‌ಸಿ ಮತ್ತು ಡಿಎಸ್‌ಬಿ ಉಪಕಾಲುವೆಗಳ ಮೂಲಕ ದೆಹಲಿಗೆ ೧೦೫೦ ಕ್ಯೂಸೆಕ್ ನೀರು ಬರಬೇಕಿದೆ. ಆದರೆ, ಕೇವಲ ೮೪೦ ಕ್ಯೂಸೆಕ್ ನೀರು ದೊರೆಯುತ್ತಿದೆ. ೭ ನೀರು ಸಂಸ್ಕರಣಾ ಘಟಕಗಳು ಈ ನೀರನ್ನೇ ಅವಲಂಬಿಸಿವೆ. ನೀರಿನ ಪ್ರಮಾಣ ಹೆಚ್ಚಾಗದಿದ್ದರೆ ಒಂದೆರಡು ದಿನಗಳಲ್ಲೇ ದೆಹಲಿಯಾದ್ಯಂತ ನೀರಿನ ಪರಿಸ್ಥಿತಿ ಹದಗೆಡುತ್ತದೆ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಏರುತ್ತಿರುವ ತಾಪಮಾನದ ನಡುವೆ, ದೆಹಲಿಯು ನೀರಿನ ಕೊರತೆ ಎದುರಿಸುತ್ತಿದೆ. ಗವರ್ನರ್ ಅವರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಪರಿಹರಿಸಲು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.