ನವದೆಹಲಿ : ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 28ರಂದು ನಡೆಯಲಿದೆ.
ಫೆಬ್ರವರಿ 2008ರಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ ರಾಬರ್ಟ್ ವಾದ್ರಾ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿ ₹7.5 ಕೋಟಿಗೆ ಖರೀದಿಸಿದ 3.5 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ವ್ಯವಹಾರದಲ್ಲಿ ಸುಳ್ಳು ದಾಖಲೆಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ದಿಢೀರನೇ, ಆಸ್ತಿಯನ್ನು ಸ್ಕೈಲೈಟ್ ಪರವಾಗಿ ರೂಪಾಂತರಿಸಿ 24 ಗಂಟೆಗಳ ಒಳಗಾಗಿ ವಾದ್ರಾಗೆ ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ.
ಆಗ ಕಾಂಗ್ರೆಸ್ ಪಕ್ಷದ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಹರಿಯಾಣ ಸರ್ಕಾರ ವಾದ್ರಾ ಸಂಸ್ಥೆಗೆ ವಾಣಿಜ್ಯ ಪರವಾನಗಿಯನ್ನು ತರಾತುರಿಯಲ್ಲಿ ನೀಡಿತ್ತು. ಇದರಿಂದಾಗಿ ಭೂಮಿಯ ಮಾರುಕಟ್ಟೆ ಮೌಲ್ಯ ನಾಟಕೀಯವಾಗಿ ಹೆಚ್ಚಾಗಿತ್ತು ಎಂದು ಆರೋಪ ಮಾಡಲಾಗಿದೆ.
ಪ್ರಕರಣ ಬಹಿರಂಗ ಪಡಿಸಿದ ಐಎಎಸ್ ಅಧಿಕಾರಿ: ವಾದ್ರಾ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ 2008 ರಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ 3.53 ಎಕರೆ ಭೂಮಿಯನ್ನು 7.5 ಕೋಟಿಗೆ ಖರೀದಿಸಿತು. ಇದಾದ ಕೆಲವು ತಿಂಗಳುಗಳ ನಂತರ, ಹರಿಯಾಣ ಸರ್ಕಾರ ಈ ಭೂಮಿಯಲ್ಲಿ ವಾಣಿಜ್ಯ ವಸಾಹತು ನಿರ್ಮಿಸಲು ಪರವಾನಗಿ ನೀಡಿತು.
ಸರ್ಕಾರದ ಈ ನಿರ್ಧಾರವು, ಭೂಮಿಯ ಬೆಲೆಯನ್ನು ಸುಮಾರು 700 ಪ್ರತಿಶತ ಹೆಚ್ಚಿಸಿತು. ಆಗ ರಾಜ್ಯವನ್ನು ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಳುತ್ತಿತ್ತು. ಇದಾದ ನಂತರ 2012 ಸೆಪ್ಟೆಂಬರ್ನಲ್ಲಿ, ಸ್ಕೈಲೈಟ್ ಈ ಭೂಮಿಯನ್ನು DLFಗೆ 58 ಕೋಟಿಗೆ ಮಾರಾಟ ಮಾಡಿತು. ಈ ಒಪ್ಪಂದವನ್ನು 2012 ರಲ್ಲಿ, ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು ಕಾನೂನುಬಾಹಿರ ಎಂದು ಕರೆದರು.
ಇಷ್ಟಕ್ಕೆ ಸುಮ್ಮನಾಗದ ಖೇಮ್ಕಾ ಇದನ್ನು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಹಿಡಿದ ಕೈಗನ್ನಡಿ ಎಂದು ಕರೆದಿದ್ದು ತನಿಖೆಗಾಗಿ ಮನವಿ ಮಾಡಿದರು. ಇದಾದ ನಂತರ 2018ರಲ್ಲಿ ಹರಿಯಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು, ಅದರ ಆಧಾರದ ಮೇಲೆ ಇಡಿ ಹಣ ವರ್ಗಾವಣೆಯ ತನಿಖೆಯನ್ನು ಪ್ರಾರಂಭಿಸಿತು.
ರಾಜಕೀಯ ಸೇಡು ಎಂದಿದ್ದ ರಾಬರ್ಟ್ ವಾದ್ರಾ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ, ರಾಬರ್ಟ್ ವಾದ್ರಾರನ್ನು ಇ.ಡಿ ಇದೇ ಪ್ರಕರಣಕ್ಕೆ ಸಂಬಂಧಿಸಿಂದಂತೆ ಈ ಹಿಂದೆ ವಿಚಾರಣೆ ನಡೆಸಿತ್ತು. ಆದರೆ ಎಲ್ಲ ಆರೋಪಗಳನ್ನು ರಾಬರ್ಟ್ ವಾದ್ರಾ ನಿರಾಕರಿಸುತ್ತಲೇ ಬಂದಿದ್ದರು.
ಇ.ಡಿ ನಡೆಯನ್ನು ರಾಜಕೀಯ ಸೇಡು ಎಂದು ರಾಬರ್ಟ್ ವಾದ್ರಾ ಕರೆದಿದ್ದಾರೆ. ‘ನಾನು ಜನರ ಹಕ್ಕುಗಳ ಬಗ್ಗೆ ಮಾತನಾಡುವಾಗಲೆಲ್ಲಾ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ’ ಎಂದ ಅವರು, ‘ನಾನು 23,000 ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದೇನೆ ಮತ್ತು ತನಿಖೆಯಲ್ಲಿ ಹಲವು ಬಾರಿ ಸಹಕರಿಸಿದ್ದೇನೆ’
ಎಂದು ಹೇಳಿದ್ದಾರೆ.