Saturday, December 6, 2025
Google search engine

Homeರಾಜಕೀಯಇಡಿ ಕಿರುಕುಳ ಖಂಡನೀಯ : ಡಿ.ಕೆ. ಶಿವಕುಮಾರ್‌

ಇಡಿ ಕಿರುಕುಳ ಖಂಡನೀಯ : ಡಿ.ಕೆ. ಶಿವಕುಮಾರ್‌

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದ್ದು, ಆ ಮೂಲಕ ನಮಗೆ ಕಿರುಕುಳ ನೀಡಲಾಗುತ್ತಿದೆ. ಇದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಡಿ ಸಮನ್ಸ್ ನೀಡಿರುವ ಬಗ್ಗೆ ತಮ್ಮ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸುತ್ತಲೇ ಬಂದಿದ್ದೇವೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಇಷ್ಟೆಲ್ಲಾ ಆದರೂ ಇಡಿ ಚಾರ್ಜ್ ಶೀಟ್ ಹಾಕಿರೋದು ಏಕೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಾವು ಕಾನೂನಾತ್ಮಕವಾಗಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ನನಗೆ ಹಾಗೂ ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ಇಡಿ ಸಮನ್ಸ್ ನೀಡಿದ್ದು, ಈಗಾಗಲೇ ನಾವು ಇದಕ್ಕೆ ಹಿಂದೆಯೇ ಉತ್ತರ ನೀಡಿದ್ದೇವೆ. ಆದರೂ ನಮಗೆ ಸಮನ್ಸ್ ನೀಡಿರುವುದು ಆಘಾತಕಾರಿ. ದೆಹಲಿ ಪೊಲೀಸರು ಡಿಸೆಂಬರ್ 19 ನೇ ತಾರೀಕಿನ ಒಳಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ನಾವು ತೆರಿಗೆ ಪಾವತಿ ಮಾಡುತ್ತಿದ್ದೇವೆ. ನಮ್ಮ ಹಣವನ್ನು ನಮಗೆ ಬೇಕಾದವರಿಗೆ ನೀಡುತ್ತೇವೆ. ಕಿರುಕುಳ ನೀಡಲು ಪಿಎಂಎಲ್‌ಎ ಪ್ರಕರಣ ಕೂಡ ದಾಖಲಿಸಿದ್ದರು. ಆನಂತರ ಏನಾಯಿತು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಜತೆಗೆ ಗೊಂದಲ ಮೂಡಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ನೋಟಿಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯಾ ಇವು ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥೆಗಳು. ನಾವು ಕಾಂಗ್ರೆಸ್ಸಿಗರಾದ ಕಾರಣಕ್ಕೆ ಈ ಸಂಸ್ಥೆಗಳು ಕಷ್ಟ ಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್‌ಗಳಿಂದ ದೇಣಿಗೆ ನೀಡಿದ್ದೇವೆ. ನಮ್ಮಂತೆ ಅನೇಕ ಜನರು ಸಹಾಯ ಮಾಡಿದ್ದಾರೆ ಎಂದಿದ್ದಾರೆ. ಶುಕ್ರವಾರ ನನಗೆ ಹಾಗೂ ಸುರೇಶ್ ಅವರಿಗೆ ನೋಟಿಸ್ ಬಂದಿದೆ. ಆತ ಸಂಸದನಾದ ಸಮಯದಲ್ಲಿ ಒಂದಷ್ಟು ಹಣ ದೇಣಿಗೆ ನೀಡಿದ್ದ. ನೋಟಿಸ್ ಅನ್ನು ವಿವರವಾಗಿ ತಿಳಿದುಕೊಂಡು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಈ ಬಗ್ಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular