ಬೆಂಗಳೂರು: ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ ಮನೆ ಮೇಲೆ ಇಡಿ ಇಂದು ಹಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ರಾಜ್ಯ ರಾಜಕೀಯದಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಒಟ್ಟಿಗೆ 16 ಕಡೆ ದಾಳಿ: ಇಂದು ಇಡಿ ಅಧಿಕಾರಿಗಳು ಒಟ್ಟಿಗೆ 16 ಕಡೆ ದಾಳಿ ಮಾಡಿದ್ದು, ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಇದ್ದು, ಇಡಿ ಕಚೇರಿಯಲ್ಲೇ ವಿಚಾರಣೆ ಮಾಡಲಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ, ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ನೀಡಿರುವ ಆರೋಪ ಇದ್ದು, ಇದರ ಜೊತೆಗೆ ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಸಹ ಕೇಳಿ ಬಂದಿದೆ. ಇನ್ನು ಶಾಸಕ ವೀರೇಂದ್ರ ಪಪ್ಪಿ ಮನೆ ಮಾತ್ರವಲ್ಲದೇ, ಅವರ ಸಹೋದರಾದ ಕೆಸಿ ನಾಗರಾಜ ಮತ್ತು ಕೆಸಿ ತಿಪ್ಪೇಸ್ವಾಮಿ ಮನೆಗಳ ಮೇಲೆಯೂ ದಾಳಿ ಮಾಡಲಾಗಿದ್ದು, ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಗೋವಾ ಸೇರಿದಂತೆ 16 ಕಡೆಗಳಲ್ಲಿ ಒಟ್ಟಿಗೆ ದಾಳಿ ಮಾಡಲಾಗಿದೆ.
ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ ಸೊಲ್ಯೂಷನ್ಸ್, ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸ್ ಕಂಪನಿಗಳ ಕಚೇರಿಯಲ್ಲಿ ಸಹ ಇಡಿ ಪರಿಶೀಲನೆ ಮಾಡಿದ್ದು, ಅವುಗಳಲ್ಲಿ ಸಹ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಈಗಾಗಲೇ ಶಾಸಕರ ಚಳ್ಳಕೆರೆ ಪಟ್ಟಣದಲ್ಲಿರುವ ನಾಲ್ಕು ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಶೋಧ ಮಾಡುತ್ತಿದ್ದಾರೆ. ಅಲ್ಲದೇ, ಈ ದಾಳಿ ಮಾಡಲು ಸುಮಾರು 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.
ಇದುವರೆಗೂ ನಡೆದ ಶೋಧ ಕಾರ್ಯದಲ್ಲಿ ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಕಳೆದ ಬಾರಿ ಸಹ ಸೀಕ್ರೇಟ್ ಲಾಕರ್ ನಲ್ಲಿ ಕೆಜಿ ಕೆಜಿ ಚಿನ್ನ ಲಭಿಸಿತ್ತು ಎನ್ನುವ ಮಾಹಿತಿ ಇದೆ. ಶಾಸಕ ವೀರೇಂದ್ರ ಅವರು ತಮ್ಮ ಮಾಲೀಕತ್ವದ ಕೆಲ ಕಂಪನಿಗಳ ಮೂಲಕ ಮನಿಲ್ಯಾಂಡ್ರಿಂಗ್ ಮಾಡುತ್ತಿದ್ದು, ವಿದೇಶದಲ್ಲಿ ಸಹ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಗೇಮಿಂಗ್ ಆಪ್‌ಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನುವ ಮಾಹಿತಿ ಇದೆ.
ಇನ್ನು ಈ ದಾಳಿ ನಡೆದಾಗ ವೀರೇಂದ್ರ ಪಪ್ಪಿ ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಅವರ ತಾಯಿ ರತ್ನಮ್ಮ ಮಾತ್ರ ಇದ್ದರು. ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂ ಪ್ರವಾಸಕ್ಕೆ ಹೋಗಿದ್ದರು ಎನ್ನುವ ಮಾಹಿತಿ ಇತ್ತು. ಹಾಗಾಗಿ ಸಿಕ್ಕಿಂನಲ್ಲಿ ಸಹ ಅವರಿಗಾಗಿ ಶೋಧ ಮಾಡಲಾಗಿತ್ತು. ಆದರೆ ಪಶ್ಚಿಮ ಬಂಗಾಳದ ಕೋಲ್ಕತ್ತಾ ಬಳಿ ಶಾಸಕರು ಸಿಕ್ಕಿದ್ದು, ಅವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.