ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಬಿಜೆಪಿಯೇತರ ನಾಯಕರನ್ನೇ ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಅದು ತನ್ನ ಹೆಸರನ್ನು ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ ಎಂದು ಸಚಿವ ದಿನೇಶ್ ಗುಂಡೂರಾವ್ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ ಕಾಂಗ್ರೆಸ್ ಶಾಸಕರು, ಸಂಸದರ ಮನೆಯಲ್ಲಿ ಇಡಿ ದಾಳಿ ನಡೆಸಿದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಜಾರಿ ನಿರ್ದೇಶನಾಲಯದ ವೈಶಿಷ್ಟ್ಯವೇನೆಂದರೆ ಅದು ದಾಳಿ ಮಾಡುವುದು ಬಿಜೆಪಿಯೇತರ ನಾಯಕರ ಮೇಲೆ ಮಾತ್ರ. ಇಲ್ಲಿಯವರೆಗೂ ಇಡಿ ಬಿಜೆಪಿ ನಾಯಕರ ತಂಟೆಗೆ ಹೋಗಿಲ್ಲ, ಹೋಗುವುದು ಇಲ್ಲ. ಇದೊಂದು ವಿಸ್ಮಯ ಎಂದು ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗಷ್ಟೆ ತಮಿಳುನಾಡಿನ ಟಿಎಎಸ್‌ಎಂಎಸಿ ಹಗರಣದಲ್ಲಿ ಇಡಿ ನಡೆಯನ್ನು ಸುಪ್ರೀಂ ಕೋರ್ಟ್ ಕಟು ಮಾತುಗಳಲ್ಲಿ ಟೀಕಿಸಿದೆ. ಇಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ. ಆದರೂ ಇಡಿ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ.