ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ವಾರಗಳಿಂದ ಮೊಟ್ಟೆ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಇದು ಸಂತಸದ ಸುದ್ದಿ ಆಗಿದ್ದರೆ ಕೋಳಿ ಸಾಕಾಣಿಕೆದಾರರಿಗೆ ಇದು ಆತಂಕದ ಕಾರಣವಾಗಿದೆ. ಕೆಲವೇ ದಿನಗಳ ಹಿಂದೆ ಒಂದು ಮೊಟ್ಟೆಯ ಬೆಲೆ ಸುಮಾರು ರೂ.7.06 ಇತ್ತಾದರೆ, ಈಗ ಅದು ರೂ.4.60ಕ್ಕೆ ಇಳಿಕೆಯಾಗಿದೆ. ಅಂದರೆ ಕೇವಲ 15 ದಿನಗಳ ಅವಧಿಯಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ.
ಮೊಟ್ಟೆ ಬೆಲೆ ಇಳಿಕೆಗೆ ಹಲವು ಕಾರಣಗಳು ಸೇರಿಕೊಂಡಿವೆ ಎಂದು ತಜ್ಞರು ತಿಳಿಸಿದ್ದಾರೆ. ಮುಖ್ಯವಾಗಿ ಗಲ್ಫ್ ರಾಷ್ಟ್ರಗಳಿಗೆ ನಡೆಯುತ್ತಿದ್ದ ಮೊಟ್ಟೆ ರಫ್ತು ತಾತ್ಕಾಲಿಕವಾಗಿ ನಿಂತಿರುವುದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಉತ್ಪಾದನೆಯಾಗುವ ಕೆಲವು ಮೊಟ್ಟೆಗಳನ್ನು ತಮಿಳುನಾಡಿನ ನಾಮಕ್ಕಲ್ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ದಿನಕ್ಕೆ ಸುಮಾರು 70 ಲಕ್ಷದಿಂದ 1 ಕೋಟಿ ಮೊಟ್ಟೆಗಳು ಈ ಮೂಲಕ ವಿದೇಶಗಳಿಗೆ ಸಾಗುತ್ತವೆ. ಆದರೆ ಯುದ್ಧ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ರಫ್ತು ಸ್ಥಗಿತಗೊಂಡಿದ್ದು ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆಗಳ ಸಂಗ್ರಹ ಹೆಚ್ಚಾಗಿದೆ.
ಇದಲ್ಲದೆ ಹಬ್ಬದ ಕಾಲದ ಬೇಡಿಕೆ ಕುಸಿತವೂ ದರ ಇಳಿಕೆಗೆ ಕಾರಣವಾಗಿದೆ. ರಂಜಾನ್ ಅವಧಿಯಲ್ಲಿ ಕೆಲ ಸಮುದಾಯಗಳಲ್ಲಿ ಮೊಟ್ಟೆ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ಈಸ್ಟರ್ ಕಾಲ ಹಾಗೂ ಬೇಸಿಗೆ ಆರಂಭವಾಗಿರುವುದರಿಂದ ಸಹ ಸಾಮಾನ್ಯವಾಗಿ ಮೊಟ್ಟೆಗಳ ಬೇಡಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತಿವೆ. ಹೊಸಪೇಟೆ ಹಾಗೂ ಮೈಸೂರು ಪ್ರದೇಶಗಳು ಮೊಟ್ಟೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿವೆ. ಬೆಲೆ ಇಳಿಕೆಯಾಗಿದ್ದರೂ ಉತ್ಪಾದನೆ ನಿಂತಿಲ್ಲದ ಕಾರಣ ಹೆಚ್ಚುವರಿ ಮೊಟ್ಟೆಗಳನ್ನು ಶೀತಗೃಹಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಕೆಲವು ಮೊಟ್ಟೆಗಳನ್ನು ಎಗ್ ಪೌಡರ್ ರೂಪಕ್ಕೆ ಪರಿವರ್ತಿಸಿ ರಫ್ತು ಮಾಡುವ ಕ್ರಮವೂ ಮುಂದುವರಿದಿದೆ.
ಆದರೆ ಆಹಾರ, ಸಾರಿಗೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿರುವ ಸಮಯದಲ್ಲಿ ಮೊಟ್ಟೆ ಬೆಲೆ ಕುಸಿತ ಕೋಳಿ ಸಾಕಾಣಿಕೆದಾರರಿಗೆ ನಷ್ಟದ ಭೀತಿಯನ್ನುಂಟು ಮಾಡಿದೆ. ಗಲ್ಫ್ ರಾಷ್ಟ್ರಗಳಿಗೆ ರಫ್ತು ಮತ್ತೆ ಆರಂಭವಾದರೆ ಮಾರುಕಟ್ಟೆ ಸ್ಥಿರವಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ.



