ಬೆಂಗಳೂರು: ರಾಜ್ಯದಲ್ಲಿ ಜಲಮೂಲಗಳ ಕೊರತೆ ಇಲ್ಲ. ಆದರೆ, ನೀರಿನ ಸದ್ಬಳಕೆಯಾಗದೆ ಬೇಸಿಗೆಯಲ್ಲಿ ಬರದ ಪರಿಸ್ಥಿತಿ ಎದುರಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಜಲಮೂಲಗಳಲ್ಲಿನ ನೀರಿನ ಸದ್ಬಳಕೆಗೆ ಅಗತ್ಯ ಯೋಜನೆಗಳನ್ನು ರೂಪಿಸಲು ಒತ್ತು ನೀಡಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಯೋಜನೆ ಮತ್ತು ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸಭೆಯಲ್ಲಿ ಪಾಲ್ಗೊಂಡು ಸಣ್ಣ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಜಲಮೂಲಗಳಿಗೆ ಕೊರತೆಯಿಲ್ಲ. ಉತ್ತಮ ಮಳೆಯೂ ಆಗುತ್ತದೆ. ಆದರೆ, ನೀರನ್ನ ಸಮರ್ಪಕವಾಗಿ ಬಳಸಲು ಅಗತ್ಯ ಯೋಜನೆಗಳು ಇಲ್ಲದ ಕಾರಣ ನೀರು ಹರಿದು ಹೋಗುತ್ತಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಮತ್ತು ನೀರಿನ ಸಮರ್ಪಕ ಬಳಕೆಗೆ ಯೋಜನೆಗಳ ಅಗತ್ಯವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜಲಮೂಲಗಳ ಕೊರತೆ ಇಲ್ಲ. ಆದರೆ, ಅದರಲ್ಲಿನ ನೀರಿನ ಸದ್ಬಳಕೆ ನಿರೀಕ್ಷತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಜಲಮೂಲಗಳಲ್ಲಿನ ನೀರಿನ ಉಳಿತಾಯ, ಸಮರ್ಪಕ ಬಳಕೆಯಿಂದ ಅಂತರ್ಜಲ ಹೆಚ್ಚಳ ಸಾಧ್ಯ. ಅಲ್ಲದೇ, ಬರದಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗಳು ನಮ್ಮ ಕೈ ಹಿಡಿಯುತ್ತವೆ. ಕೆರೆಗಳನ್ನು ತುಂಬಿಸುವ, ನೀರನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ಸಚಿವ ಎನ್ ಎಸ್ ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
೨೯ ಕೆರೆಗಳಿಗೆ ನೀರು ತುಂಬಿಸುವ ಹೊಳೆ ಹಸನವಾಡಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ ೧೨ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಡಿಸೆಂಬರ್ ತಿಂಗಳೊಳಗಾಗಿ ಮುಗಿಸಬೇಕು. ಮಂಡಗದ್ದೆ ಏತ ನೀರಾವರಿ ಯೋಜನೆಯೂ ಕೊನೆಯ ಹಂತದಲ್ಲಿದ್ದು, ಅದನ್ನೂ ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಗೊಳಿಸಿ ಎಂದು ಸಚಿವರು ಸೂಚನೆ ನೀಡಿದರು.