ಬೆಂಗಳೂರು : ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ನೀತಿಯನ್ನು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಸೂಕ್ತ ಸಾಕ್ಷ್ಯಗಳು, ಸಾರ್ವಜನಿಕ ಸಮಾಲೋಚನೆ ಇಲ್ಲದೆ ಈ ನೀತಿಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರವು 3.6 ಕೋಟಿ ಭಾರತೀಯರನ್ನು ‘ಪ್ರಯೋಗದ ವಸ್ತು’ಗಳನ್ನಾಗಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವ ಸರ್ಕಾರ : ಸಚಿವ ನಿತಿನ್ ಗಡ್ಕರಿ ಅವರು ಎ20 ಪೆಟ್ರೋಲ್‌ನಿಂದ ವಾಹನಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸವಾಲು ಹಾಕಿದ್ದರು. ಆದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ, “ಎಥೆನಾಲ್ ಮಿಶ್ರಣದ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದ್ದು, ಅದರ ಫಲಿತಾಂಶ ಮುಂದಿನ ವರ್ಷ ಬರಲಿದೆ” ಎಂದು ತಿಳಿಸಿದೆ. ಇದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಾಮಾನ್ಯ ಜನರ ಮೇಲೆ ಹೊರೆ : ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಎಂಜಿನ್ ಸಮಸ್ಯೆಗಳು ಉಂಟಾಗಿ ದುಬಾರಿ ದುರಸ್ತಿ ವೆಚ್ಚವನ್ನು ಜನಸಾಮಾನ್ಯರು ಭರಿಸಬೇಕಾಗಿದೆ ಎಂದು ಅವರು ದೂರಿದ್ದಾರೆ.
ಸುರಕ್ಷತೆ ಮತ್ತು ಸಮಾಲೋಚನೆಯ ಕೊರತೆ : ದೇಶದ 9ರಲ್ಲಿ 10 ವಾಹನಗಳು ಎ20 ಇಂಧನಕ್ಕೆ ಹೊಂದಿಕೆಯಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಸಮಾಲೋಚನೆಯಿಲ್ಲದೆ ಇದನ್ನು ಹೇರಿರುವುದು ತಪ್ಪು. “ನಮ್ಮ ರಸ್ತೆಗಳು ಪರೀಕ್ಷಾ ಟ್ರ್ಯಾಕ್‌ಗಳಲ್ಲ, ನಮ್ಮ ಜೇಬುಗಳು ನಿಮ್ಮ ಬಜೆಟ್ ಪ್ರಯೋಗಾಲಯಗಳಲ್ಲ” ಎಂದು ಅವರು ಕಿಡಿಕಾರಿದ್ದಾರೆ. ಈ ನೀತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಸ್ಪಷ್ಟನೆ
ಈ ಆರೋಪಗಳ ನಡುವೆಯೇ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸ್ಪಷ್ಟನೆ ನೀಡಿದೆ. ಎಥೆನಾಲ್ ಮಿಶ್ರಣ ಕಾರ್ಯಕ್ರಮವು ವೈಜ್ಞಾನಿಕವಾಗಿ ದೃಢೀಕೃತವಾಗಿದೆ ಮತ್ತು ಸರ್ಕಾರವು ಇದರ ಮೇಲೆ ನಿರಂತರ ನಿಗಾ ಇರಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಮತ್ತು ಹಳೆಯ ವಿಡಿಯೋಗಳಿಂದ ಗೊಂದಲ ಉಂಟಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
2003ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದು, ಇಂಧನ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. (ಏಜೆನ್ಸಿಸ್)



