ದಾವಣಗೆರೆ: ಚುನಾವಣೆಯಲ್ಲಿ ಪ್ರತಿಯೊಬ್ಬರ ಮತವೂ ಅಮೂಲ್ಯವಾಗಿದ್ದರೆ ಮತದಾನ ಮಾಡುವುದು ಪವಿತ್ರ ಕಾರ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ಹೇಳಿದರು.
ನಗರದ ಪೋಲಿಸ್ ಕವಾಯತು ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ ಹಾಗೂ ಗೃಹರಕ್ಷಕ ದಳದ ವತಿಯಿಂದ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಶೇ. 85ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಮತವೂ ಅತ್ಯಂತ ಮೌಲ್ಯಯುತವಾಗಿದೆ.

ಎಲ್ಲರೂ ಮೇ 7 ರಂದು ತಮ್ಮ ನಡಿಗೆ ಮತಗಟ್ಟೆ ಕಡೆಗೆ ಇರಲಿ ಎಂದರು. ಜಾಥಾ ಕಾರ್ಯಕ್ರಮಕ್ಕೆ ಪಿಸಿಪಿಯ ಹೆಚ್ಚುವರಿ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಯ್ ಚಾಲನೆ ನೀಡಿದರು. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸುಜಿತ್ ಕುಮಾರ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಸುಮಾರು 550 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಇತರೆ ತಾಲೂಕಿಗೆ 450 ಜನರನ್ನು ನೇಮಿಸಲಾಗಿದೆ. ಗೃಹರಕ್ಷಕ ದಳ ಕ್ಷೇತ್ರದ ಅಧಿಕಾರಿಗಳಾದ ರಾಘವೇಂದ್ರ, ಶರಣಬಸವ, ಸಿಬ್ಬಂದಿ ಸರಸ್ವತಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.