ಮಂಡ್ಯ: ಎಂ.ಹೆಚ್. ಚೆನ್ನೇಗೌಡ ವಿದ್ಯಾಸಂಸ್ಥೆ ವತಿಯಿಂದ ಬಾಬು ಜಗಜೀವನ್ ರವರ 117ನೇ ವರ್ಷದ ಜನ್ಮ ದಿನಾಚರಣೆ ಹಾಗೂ ಕಸ್ತೂರಿಬಾ ಉನ್ನತ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಡಿ.ಎನ್ ನಾಗರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಪೂರ್ವಚಂದ್ರ ರವರು “ಬಾಬುಜಿ” ಎಂದೇ ಖ್ಯಾತರಾಗಿರುವ ಜಗಜೀವನ್ ರಾಮ್ ರವರು ದೇಶ ಕಂಡ ಅತ್ಯಂತ ಸರಳ, ಧೀಮಂತ, ಬುದ್ಧಿವಂತ ರಾಜಕಾರಣಿಯಾಗಿ, ಉಪ ಪ್ರಧಾನಿಗಳಾಗಿ ಸಮರ್ಥವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದು ಮೊರಾರ್ಜಿ ದೇಸಾಯಿ ಅವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ ಜಗಜೀವನ್ ರಾಮ್ ರವರು ಅಸ್ಪೃಶ್ಯತೆ ನಿವಾರಣೆಯ ಹೋರಾಟದ ಹರಿಕಾರರಾಗಿದ್ದರು. ಇಂತಹ ಮಹಾನ್ ನಾಯಕರ ಜನ್ಮದಿನಾಚರಣೆಯನ್ನು ಈ ದಿನ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ವಿಚಾರ.ಹಾಗಾಗಿ ಇವರ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸಹಜ ನಿವೃತ್ತಿ ಹೊಂದಿದ ಶಿಕ್ಷಕರಾದ ಡಿ.ಎನ್ ನಾಗರಾಜುರವರಿಗೆ ಶುಭಾಶಯಗಳನ್ನು ಕೋರುವ ಮೂಲಕ ಸಂಸ್ಥೆಯ ವತಿಯಿಂದ ಹಾಗೂ ನಮ್ಮ ಅಂಗಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಎಂ. ಸ್ವರಾಜ್ ಚಂದ್, ಕಾರ್ಯದರ್ಶಿಗಳಾದ ಶ್ರೀಯುತ ಅಪೂರ್ವ ಚಂದ್ರ ನಿರ್ದೇಶಕರಾದ ಬೋರಯ್ಯ ಹಾಗೂ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ಶಿಕ್ಷಕ ವೃಂದದವರು ಹಾಜರಿದ್ದರು.