ಮೈಸೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 27 ವರ್ಷ ಸುದೀರ್ಘ ಸೇವೆಯನ್ನು ಮೈಸೂರು ಜಿಲ್ಲೆಯಲ್ಲಿ ಸಲ್ಲಿಸಿ ಇಂದು ವಯೋನಿವೃತ್ತಿ ಹೊಂದಿದ ವಾಹನ ಚಾಲಕರಾದ ಮಂಜುನಾಥ್ ಪಿ. ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಉಪ ನಿರ್ದೇಶಕರಾದ ವಿನೋದ್ ಚಂದ್ರ ಅವರು ಮಾತನಾಡಿ “ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಾರ್ತಾ ಇಲಾಖೆಯ ಪಾತ್ರ ಪ್ರಮುಖವಾದದ್ದು. ಪತ್ರಕರ್ತರ ವಾಹನದ ಚಾಲಕರಾಗಿ ಸೇವೆ ಸಲ್ಲಿಸುವಾಗ ತಾಳ್ಮೆ ಸಂಯಮದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಸವಾಲಿನ ಸಂದರ್ಭಗಳಲ್ಲಿಯೂ ಇವರು ತೋರುತ್ತಿದ್ದ ಸಂಯಮ ಮತ್ತು ಕಾರ್ಯದಕ್ಷತೆ ಎಲ್ಲರಿಗೂ ಮಾದರಿ ಎಂದರು.
ಸುಧೀರ್ಘ 27 ವರ್ಷಗಳ ಕಾಲ ಮೈಸೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇವರ ಅಪಾರ ಅನುಭವವು ಇಲಾಖೆಯ ಕಿರಿಯ ಸಿಬ್ಬಂದಿಗಳಿಗೆ ದಾರಿದೀಪವಾಗಿದೆ. ಇವರ ನಿವೃತ್ತಿ ಜೀವನ ಸುಖಕರವಾಗಿ ಇರಲಿ ಎಂದು ಹಾರೈಸಿದರು.
ಮಂಡ್ಯ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರಾದ ಹರೀಶ್ ಟಿ.ಕೆ. ಅವರು ಮಾತನಾಡಿ ಮಂಜುನಾಥ್ ಅವರು ಸೂಕ್ಷ್ಮ ಮನಸ್ಸಿನವರಾಗಿದ್ದು, ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಮುಂದೆ ಅವರು ನಿವೃತ್ತಿ ಜೀವನ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ಮೈಸೂರು ಜಿಲ್ಲೆಯ ಸಹಾಯಕ ನಿರ್ದೇಶಕರಾದ ನಿರ್ಮಲ ಎಸ್. ಹೆಚ್. ಅವರು ಮಾತನಾಡಿ, ಮಂಜುನಾಥ್ ಅವರು ತಮ್ಮ ವೃತ್ತಿಯನ್ನು ಅಪಾರವಾಗಿ ಗೌರವಿಸುವ ವ್ಯಕ್ತಿ. ಅವರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಸಹ, ಕಾರ್ಯಕ್ರಮಗಳ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವೃತ್ತಿಪರತೆಗೆ ಮೊದಲ ಆದ್ಯತೆ ನೀಡುತ್ತಾರೆ. ಇವರ ಈ ಕರ್ತವ್ಯ ನಿಷ್ಠೆ ನಮಗೆ ಬಹಳ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಮಂಜುನಾಥ್ ಪಿ. ಅವರು ಮಾತನಾಡಿ ಕೇವಲ ಚಾಲನೆ ಮಾಡುವುದು ನನ್ನ ಕೆಲಸವಲ್ಲ, ಪ್ರಯಾಣಿಕರ ಸುರಕ್ಷತೆ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸುವುದು ನನ್ನ ಪರಮ ಧರ್ಮ. ಸರ್ಕಾರಿ ವಾಹನ ಚಾಲಕನಾಗಿ ಸಾಮಾನ್ಯ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ವೃತ್ತಿಯಿಂದ ನಿವೃತ್ತನಾಗುತ್ತಿದ್ದರೂ, ಇಷ್ಟು ವರ್ಷಗಳ ಕಾಲ ಮಾಡಿ ವೃತ್ತಿ ಜೀವನ ತೃಪ್ತಿ ನೀಡಿದೆ ಎಂಬುದು ನನ್ನ ನಿವೃತ್ತ ಜೀವನಕ್ಕೆ ದೊಡ್ಡ ಆಸ್ತಿ ಎಂದು ಅವರು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಸಹಾಯಕರಾದ ರಮೇಶ್ ಕೆ.ಎನ್, ಸ್ವಾಗತಕಾರರು ಹಾಗೂ ಗ್ರಂಥಪಾಲಕರಾದ ಗಾಯತ್ರಿ, ದ್ವಿತೀಯ ದರ್ಜೆ ಸಹಾಯಕ ಪ್ರತಾಪ್ ಎಂ.ಡಿ., ಮಂಜುನಾಥ್ ಅವರ ಧರ್ಮಪತ್ನಿ ರತಿಶ್ರೀ ಗೌಡ, ಮಗಳಾದ ಮಂಜು ಶ್ರೀ ಗೌಡ ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.



