ಶಿವಮೊಗ್ಗ: ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದಾರೆ. ಆ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಇನ್ನೂ ಶಿವಮೊಗ್ಗದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಕೂಡ ಪಕ್ಷ ಸಂಘಟನೆಯಲ್ಲಿ ಜೊತೆಗೆ ಇರುತ್ತೇನೆ. ನಿಮ್ಮೊಂದಿಗೆ ಕೆಲಸ ಮಾಡುವೆ. ಯಾವಾಗ ಕರೆದರೂ ಬರುವುದಾಗಿ ತಿಳಿಸಿದರು.
ನೂತನ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಅವರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಇಂತಹ ಅವರಿಗೆ ಈ ಹುದ್ದೆಯನ್ನು ನೀಡಿದ್ದು ಹರ್ಷತಂದಿದೆ. ನನ್ನ ಚುನಾವಣಾ ಪ್ರಚಾರದಲ್ಲೂ ಶ್ರಮಿಸಿದ್ದರು. ಅವರಿಗೆ ಅಭಿನಂದನೆಗಳು ಅಂತ ಹೇಳಿದರು.
ಇಂದಿನ ಸಮಾವೇಶವು ಖುಷಿ ತಂದಿದೆ. ಮಹಿಳೆಯರು ಅಬಲೆಯರಲ್ಲ. ಅವರು ಎಲ್ಲರನ್ನು ಜೊತೆಗೂಡಿಸಿಕೊಂಡು ಪಕ್ಷ ಸಂಘಟನೆಯ ಕೆಲಸ ಮಾಡಲಿ ಎಂಬುದಾಗಿ ಸಲಹೆಯನ್ನು ಗೀತಾ ಶಿವರಾಜ್ ಕುಮಾರ್ ನೀಡಿದರು.