ಮಂಡ್ಯ : ಪ್ರೀತಿಸಿ ಮದುವೆಯಾದ ಅಳಿಯನ ಮೇಲೆ ಕೋಪಗೊಂಡ ಮಾವನೊಬ್ಬ ಅಳಿಯನ ಮನೆಗೇ ಬೆಂಕಿ ಹಚ್ಚಿರುವ ಘಟನೆ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ. ಚುಂಚಗಹಳ್ಳಿ ಗ್ರಾಮದ ವಿನೋದ್ ಮತ್ತು ಕಾವ್ಯಾ ಎಂಬುವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕಾವ್ಯಾ ಮನೆಯಲ್ಲಿ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಕಳೆದ ಗುರುವಾರ ಮದುವೆಯಾಗಿತ್ತು.

ತನ್ನ ಮಗಳು ವಿರೋಧದ ನಡುವೆ ಮದುವೆಯಾಗಿದ್ದರಿಂದ ಕಾವ್ಯಾ ತಂದೆ ಚನ್ನೇಗೌಡ ತೀವ್ರ ಆಕ್ರೋಶಗೊಂಡಿದ್ದರು. ಇದೇ ಕೋಪದಲ್ಲಿ ಇಂದು (ಶನಿವಾರ) ಬೆಳಿಗ್ಗೆ ಅಳಿಯ ವಿನೋದ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಬರೆ ಹಾಗೂ ಅಡುಗೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ಆರೋಪಿ ಚನ್ನೇಗೌಡನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



