ಮಂಡ್ಯ: ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿನ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣ ಬಯಲಾದ ಬೆನ್ನಲ್ಲೇ, ತಾಲ್ಲೂಕಿನಲ್ಲಿ ಮತ್ತೊಂದು ಭ್ರೂಣ ಹತ್ಯೆ ನಡೆದಿರುವ ಬಗ್ಗೆ ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.
ಭ್ರೂಣ ಪತ್ತೆಗೆ ಒಳಗಾಗಿ ಅಕ್ರಮವಾಗಿ ಗರ್ಭಪಾತಕ್ಕೆ ಮಾಡಿಸಿಕೊಂಡಿದ್ದ ಮಹಿಳೆಯೊಬ್ಬಳು ತೀವ್ರ ರಕ್ತಸ್ರಾವದಿಂದ ಒಂದೂವರೆ ತಿಂಗಳ ಬಳಿಕ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಮಾಲಾಶ್ರೀ ಭ್ರೂಣ ಪತ್ತೆಯ ನಂತರ ಅಬಾಷನ್‌ಗೆ ಒಳಗಾಗಿದ್ದ ಮಹಿಳೆ. ಕಳೆದ ಒಂದೂವರೆ ತಿಂಗಳ ಹಿಂದೆಯೇ ಭ್ರೂಣ ಪತ್ತೆ ಹಚ್ಚಿ ಹತ್ಯೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಮಹಿಳೆಗೆ ಈಗಾಗಲೇ ೯ ವರ್ಷ ಮತ್ತು ಒಂದೂವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳಿರುವುದಾಗಿ ಗೊತ್ತಾಗಿದೆ. ಒಂದೂವರೆ ತಿಂಗಳುಗಳು ಕಳೆದ ಬಳಿಕ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಗಾಬರಿಗೊಂಡು ಆಕೆ ಗುರುವಾರ ಮಧ್ಯಾಹ್ನ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ದಾಖಲಾಗಿ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆ ನಡೆಸಿ ವೈದ್ಯರು ಅನುಮಾನಗೊಂಡು ವಿಚಾರಿಸಿದ ವೇಳೆ ಗರ್ಭಪಾತ ಮಾಡಿಸಿಕೊಂಡಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾಳೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆ ಮತ್ತು ಕುಂತಿಬೆಟ್ಟದ ನಡುವಿನಲ್ಲಿ ಸ್ಥಳದಲ್ಲಿ ಭ್ರೂಣ ಪತ್ತೆ ಹಚ್ಚಿ ತಾಲೂಕಿನ ಹೊಸಕೋಟೆ ಗ್ರಾಮದ ಹೆಂಚಿನ ಮನೆಯಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾಗಿ ಮಹಿಳೆ ವೈದ್ಯರಿಗೆ ಮಾಹಿತಿ ನೀಡಿದ್ದಾಳೆ.
ಡಿಎಚ್‌ಒ ಭೇಟಿ ಪರಿಶೀಲನೆ : ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಧಿಕಾರಿ ಮೋಹನ್, ಮಹಿಳೆಯ ಆರೋಗ್ಯ ವಿಚಾರಣೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮತ್ತು ಸ್ತ್ರೀರೋಗ ತಜ್ಞೆ ಶಿಲ್ಪ ಅವರಿಂದ ಮಾಹಿತಿ ಪಡೆದುಕೊಂಡರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಾಗಿದೆ.


