ನವದೆಹಲಿ : ಫಿಫಾ ವಿಶ್ವಕಪ್ನ ರೌಂಡ್ ಆಫ್ 16 ಪಂದ್ಯದಲ್ಲಿ ಫ್ರಾನ್ಸ್ ತಂಡವು ಪರಾಗ್ವೆ ವಿರುದ್ಧ 1-0 ಗೋಲುಗಳ ರೋಚಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ. ಫಿಲಡೆಲ್ಫಿಯಾದಲ್ಲಿ ನಡೆದ ಈ ಪಂದ್ಯದ 70ನೇ ನಿಮಿಷದಲ್ಲಿ ವಿಎಆರ್ (VAR) ನೀಡಿದ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ನಾಯಕ ಕಿಲಿಯನ್ ಎಂಬಪ್ಪೆ ಪಂದ್ಯದ ಏಕೈಕ ಗೋಲು ಬಾರಿಸಿದರು. ಈಗ ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ ತಂಡವು ಮೊರಾಕೊ ತಂಡವನ್ನು ಎದುರಿಸಲಿದೆ.
ಇದಕ್ಕೂ ಮುನ್ನ, ಟೆಕ್ಸಾಸ್ನ ಹೂಸ್ಟನ್ನಲ್ಲಿ ನಡೆದ ಪಂದ್ಯದಲ್ಲಿ ಮೊರಾಕೊ ತಂಡವು ಕೆನಡಾ ವಿರುದ್ಧ 3-0 ಗೋಲುಗಳ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿತ್ತು.
ಮೊದಲಾರ್ಧದಲ್ಲಿ ಕಠಿಣ ಸವಾಲು ಎದುರಿಸಿದ ಮೊರಾಕೊ ಪರ ದ್ವಿತೀಯಾರ್ಧದಲ್ಲಿ ಅಜ್ಜೆದ್ದೀನ್ ಔನಾಹಿ (Azzedine Ounahi) ಎರಡು ಅದ್ಭುತ ಗೋಲುಗಳನ್ನು ಬಾರಿಸಿ ಮಿಂಚಿದರು. ಪಂದ್ಯದ ಮುಕ್ತಾಯದ ಹೆಚ್ಚುವರಿ ಸಮಯದಲ್ಲಿ (stoppage-time) ಸೌಫಿಯಾನ್ ರಹೀಮಿ ಮತ್ತೊಂದು ಗೋಲು ಗಳಿಸುವ ಮೂಲಕ ಆಫ್ರಿಕನ್ ಚಾಂಪಿಯನ್ ಮೊರಾಕೊ ತಂಡದ ಭರ್ಜರಿ ಜಯವನ್ನು ಖಚಿತಪಡಿಸಿದರು.
ಕೊಲಂಬಿಯಾ vs ಘಾನಾ: ನಿನ್ನೆ ಕನ್ಸಾಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ ರೌಂಡ್ ಆಫ್ 32 ರ ಕೊನೆಯ ಪಂದ್ಯದಲ್ಲಿ ಕೊಲಂಬಿಯಾ ತಂಡವು ಘಾನಾ ವಿರುದ್ಧ 1-0 ಗೋಲುಗಳ ಅಂತರದಿಂದ ಜಯಗಳಿಸಿ ರೌಂಡ್ ಆಫ್ 16 ಗೆ ಅರ್ಹತೆ ಪಡೆದಿದೆ. ಕ್ವಾರ್ಟರ್ ಫೈನಲ್ ಪ್ರವೇಶಕ್ಕಾಗಿ ಕೊಲಂಬಿಯಾ ಈಗ ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ.
ಅರ್ಜೆಂಟೀನಾ vs ಕೇಪ್ ವರ್ಡೆ (Cabo Verde): ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ರೋಚಕ ಹಣಾಹಣಿಯಲ್ಲಿ ಹೆಚ್ಚುವರಿ ಸಮಯದ ಬಳಿಕ ಕೇಪ್ ವರ್ಡೆ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ರೌಂಡ್ ಆಫ್ 16 ಪ್ರವೇಶಿಸಿದೆ. ಅರ್ಜೆಂಟೀನಾ ತನ್ನ ಮುಂದಿನ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು ಎದುರಿಸಲಿದೆ.
ಈಜಿಪ್ಟ್ vs ಆಸ್ಟ್ರೇಲಿಯಾ: ನಿಗದಿತ ಮತ್ತು ಹೆಚ್ಚುವರಿ ಸಮಯದಲ್ಲಿ 1-1 ಗೋಲುಗಳಿಂದ ಸಮಬಲಗೊಂಡಿದ್ದ ಪಂದ್ಯದಲ್ಲಿ, ಈಜಿಪ್ಟ್ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾವನ್ನು 4-2 ರಿಂದ ಸೋಲಿಸಿ ಮುನ್ನಡೆದಿದೆ.



