ವರದಿ: ಸ್ಟೀಫನ್ ಜೇಮ್ಸ್
ಹಾಸನಾಂಬೆಯ ದರ್ಶನಕ್ಕೆ 3 ದಿನವಷ್ಟೇ ಬಾಕಿ ಇದೆ. ಅಕ್ಟೋಬರ್ 9ರಂದು ಆಶ್ವೀಜ ಮಾಸದ ಮೊದಲ ಗುರುವಾರ, ಮಧ್ಯಾಹ್ನ 12 ಗಂಟೆ ನಂತರ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.
100ಕ್ಕೂ ಹೆಚ್ಚು ಸಂಚಾರಿ ಶೌಚಾಲಯ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ನೂಕು ನುಗ್ಗಲನ್ನು ತಡೆಯಲು, ಪೊಲೀಸ್ ಇಲಾಖೆಯೂ ಅಗತ್ಯ ಕ್ರಮ ಕೈಗೊಂಡಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿ, ಗೋಲ್ಡ್ ಪಾಸ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ವಾಟ್ಸಾಪ್ ಚಾಟ್ ಬಾಟ್ ಮೂಲಕ, ಭಕ್ತರಿಗೆ ಆನ್‌ಲೈನ್ ನೆರವು ನೀಡಲಾಗುತ್ತಿದೆ. ಟಿಕೆಟ್ ಬುಕ್ಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಎಐ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ಸೇವೆಯನ್ನು, ದೇವಾಲಯ ಆಡಳಿತ ಮಂಡಳಿ ಕಲ್ಪಿಸುತ್ತಿದೆ. ಇನ್ನು, ಮುಂಜಾಗ್ರತಾ ಕ್ರಮವಾಗಿ 100ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ.
ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ, ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಸಿಗಲಿದೆ. ಬಾಗಿಲು ತೆರೆದ ದಿನ ದೇವಾಲಯದ ಗರ್ಭಗುಡಿ ಶುಚಿತ್ವ ಹಿನ್ನೆಲೆ ಅಕ್ಟೋಬರ್ 9ರಂದು ಸಾರ್ವಜನಿಕ ದರ್ಶನ ಇರೋದಿಲ್ಲ. ಅ. 23ರಂದು ಬಲಿಪಾಡ್ಯಮಿಯ ಮಾರನೇ ದಿನ ಸಂಪ್ರದಾಯ ಬದ್ಧವಾಗಿ ಹಾಸನಾಂಬೆ ದೇಗುಲದ ಮುಚ್ಚಲಿದೆ.