ಮೈಸೂರು: ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಆಮಿಷ ಒಡ್ಡಿ 35 ಲಕ್ಷ ರೂ. ವಂಚನೆ ಮಾಡಿದ ಆರೋಪದ ಮೇಲೆ ಮೈಸೂರಿನಲ್ಲಿ ಪೊಲೀಸ್ ಪೇದೆ ಮತ್ತು ಅವರ ಪತ್ನಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಮೇಟಗಳ್ಳಿ ಪೊಲೀಸ್ ಠಾಣೆ ಪೇದೆ P.J.ರಾಜು ಹಾಗೂ ಇವರ ಪತ್ನಿ ನಂದಿನಿ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಆಮಿಷ ನೀಡಿ 35 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ವಂಚನೆಗೆ ಒಳಗಾದ ಮಹಾಲಕ್ಷ್ಮಿ, ಮಂಜುಳಾ ಹಾಗೂ ಸಿದ್ದೇಶ್ ಎಂಬುವರು ದೂರು ನೀಡಿದ್ದರು.
2022 ರಲ್ಲಿ ಪೇದೆ ರಾಜು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಾಲಕ್ಷ್ಮಿ, ಮಂಜುಳಾ ಹಾಗೂ ಸಿದ್ದೇಶ್ ರವರ ಬಳಿ ಹಂತಹಂತವಾಗಿ 35 ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ತಾನು ಪೇಪರ್ ಗ್ಲಾಸ್ ಜ್ಯೂಸ್ ಲೋಟ ಫ್ಯಾಕ್ಟರಿ ನಿರ್ವಹಿಸುತ್ತಿದ್ದೇನೆ. ಇದಕ್ಕೆ ನಿಮ್ಮನ್ನ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ಆಮಿಷವೊಡ್ಡಿ 35 ಲಕ್ಷ ಪಡೆದು ವಂಚಿಸಿದ್ದಾರೆ. ನಮ್ಮ ಹಣ ವಾಪಸ್ ನೀಡುವಂತೆ ಮನೆಗೆ ಹೋಗಿ ಮನವಿ ಮಾಡಿದಾಗ ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆ ಎಂದು ರಾಜು ಬೆದರಿಸಿದ್ದು,ಜೊತೆಗೆ ಅವರ ಪತ್ನಿ ನಂದಿನಿ ಅವರು ಮಹಾಲಕ್ಷ್ಮಿ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜು ಈ ಹಿಂದೆ ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದಾರೆಂಬ ಆರೋಪದ ಮೇಲೆ ಅಮಾನತಾಗಿದ್ದರು. ನಂತರ ಮೇಟಗಳ್ಳಿ ಠಾಣೆಗೆ ನಿಯೋಜನೆಗೊಂಡಿದ್ದರು.



