Tuesday, August 5, 2025
Google search engine

Homeಸ್ಥಳೀಯಹಳೇ ಕೆಸರೆ ಘನತ್ಯಾಜ್ಯ ಘಟಕದಲ್ಲಿ ಬೆಂಕಿ ಅವಘಡ: ಜನಸ್ಪಂದನ ಸಮಿತಿಯಿಂದ ತಕ್ಷಣ ಸ್ಪಂದನೆ

ಹಳೇ ಕೆಸರೆ ಘನತ್ಯಾಜ್ಯ ಘಟಕದಲ್ಲಿ ಬೆಂಕಿ ಅವಘಡ: ಜನಸ್ಪಂದನ ಸಮಿತಿಯಿಂದ ತಕ್ಷಣ ಸ್ಪಂದನೆ

ಮೈಸೂರು : ನಗರದ ಹಳೇ ಕೆಸರೆ ಬಡಾವಣೆಯಲ್ಲಿರುವ ಶೂನ್ಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಳಗ್ಗೆ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗಿನ ವಾಯು ವಿಹಾರಕ್ಕೆ ಹೊರಟ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದರಿಂದ ಇಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ. ಆದಾಗ್ಯೂ ಸಂಸ್ಕರಣಾ ಘಟಕದಲ್ಲಿನ ಯಂತ್ರೋಪಕರಣಗಳು ಹಾನಿಗೊಳಗಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಆಗಮಿಸಿ ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿದರು, ಇದರಿಂದ ಸಂಭವನೀಯ ಅಪಾಯ ತಪ್ಪಿದಂತಾಯ್ತು, ಅಪಾರ ಪ್ರಮಾಣದಲ್ಲಿ ಪ್ರಾಸ್ಲಿಕ್ ಬೆಂಕಿಗೆ ಆಹುತಿಯಾದ ಕಾರಣ ಸ್ಥಳದಲ್ಲಿ ದಟ್ಟಹೊಗೆ ಆವರಿಸಿತ್ತಲ್ಲದೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳ ಸುಟ್ಟ ದುರ್ವಾಸನೆಯೂ ತುಂಬಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಉಂಟಾಯಿತು.


ವಿಷಯ ತಿಳಿದು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾದೇಶ ಅವರು ತಮ್ಮ ಸಿಬ್ಬಂದಿಗಳು ಮತ್ತು ಇತರೆ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.
ಹಳೇ ಕೆಸರೆ ಬಡಾವಣೆಯ ಶೂನ್ಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಜಮಾಯಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಕೂಡಲೇ ಘಟಕವನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿದ್ದಲಿಂಗಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾದೇಶ ಅವರು ಮಾತನಾಡಿ, ಇದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆದ ಘಟನೆ, ಪಾಲಿಕೆ ನೌಕರರೇ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗದೆ ಇಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದರಲ್ಲದೇ, ತ್ಯಾಜ್ಯ ವಿಲೇವಾರಿ ಘಟಕದಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ, ಆಗಾಗ್ಗೆ ಇಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುತ್ತಲೂ ವಾಸಿಸುವ ಜನರಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ, ಪಕ್ಕದಲ್ಲೇ ಹರಿಯುವ ವರುಣಾ ನಾಲೆಯ ನೀರು ಸಹ ಕಲುಷಿತಗೊಳ್ಳುತ್ತಿದೆ, ಕೂಡಲೇ ಈ ಘಟಕವನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು.


ಜನಸ್ಪಂದನಾ ವೇದಿಕೆ ಕಾರ್ಯದರ್ಶಿ ಪ್ರಶಾಂತ್ ಅವರು ಮಾತನಾಡಿ, ಈ ಘಟಕ ಇಲ್ಲಿ ಪ್ರಾರಂಭವಾದ ದಿನದಿಂದ ದುರ್ವಾಸನೆ ಹೆಚ್ಚಾಗಿದೆ. ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸಲು ಆಗುತ್ತಿಲ್ಲ, ಇದನ್ನು ಸ್ಥಳಾಂತರ ಮಾಡುವಂತೆ ಒಂದು ವರ್ಷದಿಂದ ನಾವು ಜನಸ್ಪಂದನಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಉಸ್ತುವಾರಿ ಸಚಿವರಿಗೆ ಅರ್ಜಿ ಕೊಟ್ಟಿದ್ದೇವೆ ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಘಟದ ವಾಸನೆಯಿಂದ ಮನುಷ್ಯನ ಸ್ವಾಸ್ಥ್ಯ ಹಾಳಾಗುತ್ತಿದೆ, ಡಪ್ಪಿಂಗ್ ಯಾರ್ಡ್‌ನ ಕೊಳಚೆ ನೀರನ್ನು ಪಕ್ಕದಲ್ಲೇ ಹರಿಯುವ ವರುಣಾ ನಾಲೆಗೆ ಬಿಡಲಾಗುತ್ತಿದೆ. ಈ ವಿಷಯುಕ್ತ ನೀರಿನಿಂದ ಬೆಳೆಗಳು ಹಾಳಾಗುವುದಲ್ಲದೇ ಅಂತರ್ಜಲವೂ ಕೆಟ್ಟುಹೋಗುತ್ತಿದೆ, ಅಲ್ಲದೇ, ಬೆಂಕಿಯ ಹೊಗೆಯಿಂದ ದುರ್ವಾಸನೆ ಬರುವುದರ ಜತೆಗೆ ಪರಿಸರವೂ ಹಾಳಾಗುತ್ತಿದೆ. ಇತ್ತೀಚೆಗೆ ಈ ಘಟಕಕ್ಕೆ ಉಪ ಲೋಕಾಯುಕ್ತರು ಭೇಟಿ ನೀಡಿದ್ದರು, ಆಗಲೂ ನಾವು ಮನವಿ ಕೊಟ್ಟಿದ್ದೆವು. ಸರ್ಕಾರ ಕೂಡಲೇ ಈ ಭಾಗದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಘಟಕ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರೇವಣ್ಣ, ಸಿದ್ದಲಿಂಗಪುರ ಗ್ರಾಮದ ಯಜಮಾನರಾದ ಶಿವಮಲ್ಲು, ವೆಂಕಟರಾಜು, ಅಲಸಿಂಗನ್, ಜಯಶಂಕರ್, ಅಂಬೇಡ್ಕರ್ ಯುವ ಸಂಘದ ಕಾರ್ಯಕರ್ತರು ಇತರೆ ಸಾರ್ವಜನಿಕರು ಇದ್ದರು.

ಪಾಲಿಕೆ ಆರೋಗ್ಯ ಅಧಿಕಾರಿಗೆ ಘೇರಾವ್:
ಹಳೇ ಕೆಸರೆಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆರೋಗ್ಯ ಅಧಿಕಾರಿಯನ್ನು ಪ್ರತಿಭಟನಾಕಾರರು ಘೇರಾವ್ ಮಾಡಿದರಲ್ಲದೇ, ತ್ಯಾಜ್ಯ ಸಂಸ್ಕರಣಾ ಘಟಕದಿಂದ ಸಾರ್ವಜನಿಕರ ಆರೋಗ್ಯ ಹಾಳಾಗುತ್ತಿದೆ. ನೀವು ಆರೋಗ್ಯ ತಪಾಸಣೆ ಮಾಡಿಸುತ್ತೇವೆ ಎಂದವರು ಇಲ್ಲಿಯ ತನಕವೂ ತಪಾಸಣಾ ಶಿಬಿರ ಏರ್ಪಡಿಸಿಲ್ಲ, ಘಟಕದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಈ ಬಗ್ಗೆ ನೀವು ಸರ್ಕಾರಕ್ಕೆ ವರದಿ ಸಲ್ಲಿಸಿ ಇದನ್ನು ಸ್ಥಳಾಂತರ ಮಾಡಿಸಬೇಕೆಂದು ಆಗ್ರಹಿಸಿ ತರಾಟೆಗೆ ತೆಗೆದುಕೊಂಡರು.


ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನೀರಿಲ್ಲ:

ದಿನನಿತ್ಯ ನೂರಾರು ಟನ್ ತ್ಯಾಜ್ಯ ಸಂಗ್ರಹವಾಗುವ ಸ್ಥಳದಲ್ಲಿ ಯಾವುದೇ ಅಗ್ನಿ ನಿರೋಧಕ ವ್ಯವಸ್ಥೆ ಇಲ್ಲ, ಕನಿಷ್ಠ ಇಲ್ಲಿ ನೀರಿನ ಸೌಲಭ್ಯವೂ ಇಲ್ಲ, ಅಗ್ನಿಶಾಮಕ ಯಂತ್ರದಲ್ಲಿ ನೀರು ಖಾಲಿ ಆಗುತ್ತಿದ್ದಂತೆ ಬೇರೆ ಕಡೆ ಹೋಗಿ ನೀರು ತುಂಬಿಸಿಕೊಂಡು ಬಂದು ಬೆಂಕಿ ನಂದಿಸಲಾಗಿದೆ. ಇದು ಈ ಘಟಕದಲ್ಲಿನ ಅವ್ಯವಸ್ಥೆ.

ಮಾದೇಶ, ಅಧ್ಯಕ್ಷರು ಸಿದ್ದಲಿಂಗಪುರ ಗ್ರಾಪಂ

RELATED ARTICLES
- Advertisment -
Google search engine

Most Popular