ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇಲದಕೆರೆ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಗ್ರಾಮದ ಲತಾ ಚನ್ನೇಗೌಡ ಎಂಬುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಳಗಿದ್ದ ಬಟ್ಟೆ ಬರೆ, ದಿನಸಿ ಸಾಮಗ್ರಿಗಳು, ಒಡವೆಗಳು ಸುಟ್ಟು ಕರಕಲಾಗಿವೆ.
ಹೊಸ ಮನೆ ಕಟ್ಟಲೆಂದು ಕುರಿಗಳನ್ನು ಮಾರಿ ಬೀರುವಿನಲ್ಲಿ ಇಟ್ಟಿದ್ದ ಸುಮಾರು ಐದು ಲಕ್ಷ ರೂಪಾಯಿ ನಗದು ಸಹ ಬೆಂಕಿಗಾಹುತಿಯಾಗಿದೆ.
ಬೆಂಕಿ ಬಿದ್ದಿರುವ ವಿಚಾರ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಹೆಚ್.ಟಿ.ಮಂಜು, ತಹಸೀಲ್ದಾರ್ ನಿಸರ್ಗಪ್ರಿಯ ಭೇಟಿ ನೀಡಿದ್ದು, ನೊಂದ ಲತಾ ಚನ್ನೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.